ರಾಯಚೂರು: ವಸತಿ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ - Students protest at Raichur
🎬 Watch Now: Feature Video
Published : Dec 18, 2023, 6:40 PM IST
ರಾಯಚೂರು : ಯರಮರಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಇಂದು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತವಾದ ವಸತಿ ಸೌಲಭ್ಯ ಇಲ್ಲ. ಹಾಸ್ಟೆಲ್ ಸೌಲಭ್ಯವಿದ್ದರೂ ಕಾಲೇಜಿನಿಂದ ಬಹಳ ದೂರದಲ್ಲಿದೆ. ಯರಮರಸ್ ಕ್ಯಾಂಪ್ನಲ್ಲಿ ಕಾಲೇಜಿದ್ದರೆ ಬೊಳಮ್ಮನದೊಡ್ಡಿ ರಸ್ತೆಯಲ್ಲಿ ಹಾಸ್ಟೆಲ್ ಇದೆ. ಹಾಸ್ಟೆಲ್ ಕಾಲೇಜಿನಿಂದ ಸುಮಾರು 10 ಕಿಮೀ ದೂರವಿದ್ದು, ಬಸ್ ಸೌಕರ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಬಸ್ ನಿಲ್ದಾಣಕ್ಕೆ ಹೋಗಿ ಯರಮರಸ್ ಕ್ಯಾಂಪ್‌ಗೆ ಬರಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ ಎಂದು ವಿದ್ಯಾರ್ಥಿನಿ ತಮ್ಮ ಅಳಲು ತೋಡಿಕೊಂಡರು.
ಬೆಳಗ್ಗೆ 7 ಗಂಟೆಗೆ ಬಸ್ ಇರುವುದರಿಂದ ಈ ವೇಳೆ ವಸತಿ ನಿಲಯದಲ್ಲಿ ಟಿಫನ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಬಸ್ ಸೌಕರ್ಯಯಿಲ್ಲದ ಪರಿಣಾಮ ಆಟೋದಲ್ಲಿ ತೆರಳಬೇಕಾಗಿದ್ದು, ನಿತ್ಯ 50 ರೂಪಾಯಿ ಬೇಕಾಗುತ್ತದೆ. ಕೆಲವೊಮ್ಮೆ ಇತರ ವಾಹನಗಳಲ್ಲಿ ತೆರಳುತ್ತೇವೆ. ಇದೇ ರೀತಿ ಆಟೋ ದಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳಿದ್ದ ಆಟೋವೊಂದು ಇತ್ತೀಚೆಗೆ ಪಲ್ಟಿಯಾಗಿತ್ತು. ಈ ವೇಳೆ, 6 ಮಂದಿ ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿತ್ತು ಎಂದು ವಿದ್ಯಾರ್ಥಿ ತಮ್ಮ ಸಮಸ್ಯೆ ಹೇಳಿಕೊಂಡರು.
ನಮ್ಮ ಕಾಲೇಜಿನ ಆವರಣದಲ್ಲಿ ಐಐಐಟಿ ಕಾಲೇಜು ನಡೆಯುತ್ತಿದೆ. ಅವರಿಗೆ ವಿವಿಧ ಸೌಲಭ್ಯ ಒದಗಿಸಲಾಗಿದೆ. ಅದರ ಜೊತೆಗೆ ನಮಗೂ ವಸತಿ ನಿಲಯ ಸೌಲಭ್ಯ ಕಲ್ಪಿಸಬೇಕು. ಇದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಕಾಲೇಜಿನ ಪ್ರಾಂಶುಪಾಲರಾಗಿ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಜಿಪಂ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರ ಶಕ್ತಿ ಪ್ರದರ್ಶನ