ಮೊಮ್ಮಗನಿಗೆ ಕಚ್ಚಿದ ವಿಷಪೂರಿತ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿ ಆಸ್ಪತ್ರೆಗೆ ಆಗಮಿಸಿದ ಅಜ್ಜ!- ವಿಡಿಯೋ - ತ್ರಿವೇಣಿಗಂಜ್ ಆಸ್ಪತ್ರೆ
🎬 Watch Now: Feature Video
ಸುಪೌಲ್ (ಬಿಹಾರ) : ಇಲ್ಲಿನ ಸುಪೌಲ್ ಎಂಬಲ್ಲಿ 2 ವರ್ಷದ ಬಾಲಕನಿಗೆ ವಿಷಪೂರಿತ ಹಾವೊಂದು ಕಚ್ಚಿದ್ದು, ಮಗುವಿನ ಅಜ್ಜ ಧೈರ್ಯ ತೋರಿ ಕೂಡಲೇ ಹಾವು ಹಿಡಿದಿದ್ದಾರೆ. ಬಳಿಕ, ಮೊಮ್ಮಗನ ಸಮೇತ ಹಾವಿನೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಅಚ್ಚರಿಗೊಂಡು ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಘಟನೆ ಜಿಲ್ಲೆಯ ತ್ರಿವೇಣಿಗಂಜ್ ಪ್ರದೇಶದಲ್ಲಿ ನಡೆಯಿತು.
ಮಾಹಿತಿ ಪ್ರಕಾರ, ಕಠೋಲ್ವಾ ವಾರ್ಡ್ ನಿವಾಸಿ ಶಾಂತಿದೇವಿ ಎಂಬವರ 2 ವರ್ಷದ ಮೊಮ್ಮಗ ಉತ್ತಮ್ ಬಾಗಿಲಲ್ಲಿ ಆಟವಾಡುತ್ತಿದ್ದ. ಅಷ್ಟರಲ್ಲಿ ವಿಷಕಾರಿ ಹಾವು ಕಚ್ಚಿದೆ. ಮಗು ಜೋರಾಗಿ ಅಳಲು ಆರಂಭಿಸಿದ್ದು, ಮೊಮ್ಮಗ ಅಳುತ್ತಿರುವುದನ್ನು ನೋಡಿದ ಅಜ್ಜ ಅಲ್ಲಿಗೆ ಬಂದಾಗ ಹಾವು ಹರಿದು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಮಗುವಿನ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕಾಣಿಸಿರುವುದನ್ನು ನೋಡಿ, ಧೈರ್ಯ ತೋರಿ ಹಾವನ್ನು ಹಿಡಿದು ಪೆಟ್ಟಿಗೆಯಲ್ಲಿಟ್ಟುಕೊಂಡು ತ್ರಿವೇಣಿಗಂಜ್ ಆಸ್ಪತ್ರೆಗೆ ತೆರಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ತ್ರಿವೇಣಿಗಂಜ್ ಉಪವಿಭಾಗೀಯ ಆಸ್ಪತ್ರೆಯ ವೈದ್ಯ ಡಾ. ಉಮೇಶ್ ಕುಮಾರ್, "ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಒಂದೂವರೆ ಗಂಟೆ ಕಳೆದರೂ ಹಾವು ಕಚ್ಚಿದ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬಂದಿಲ್ಲ. ಹೆಚ್ಚಿನ ನಿಗಾ ವಹಿಸಲಾಗಿದೆ" ಎಂದರು. ಇನ್ನೊಂದೆಡೆ, ತಾತನ ಸಾಹಸದ ವಿಷಯ ತಿಳಿಯುತ್ತಿದ್ದಂತೆ ತ್ರಿವೇಣಿಗಂಜ್ ಪ್ರದೇಶದಲ್ಲಿ ಧೈರ್ಯಶಾಲಿ ಅಜ್ಜನ ಬಗ್ಗೆ ಮತ್ತು ಮೊಮ್ಮಗನ ಮೇಲಿನ ಪ್ರೀತಿಯ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : Watch Video: ಬೆಡ್ ರೂಮಿಗೆ ಬಂದು ಯುವಕನ ಪಕ್ಕ ಹಾಯಾಗಿ ಮಲಗಿದ್ದ ನಾಗರ ಹಾವು!