ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಾಂಗ್ರೆಸ್​ ನಾಯಕರು! - siddaramaiah and dk shivakumar met

🎬 Watch Now: Feature Video

thumbnail

By

Published : May 18, 2023, 10:20 PM IST

Updated : May 18, 2023, 10:58 PM IST

ಬೆಂಗಳೂರು: ಕರ್ನಾಟಕದಲ್ಲಿ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಮೇ 20 (ಶನಿವಾರ) ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​ ಮತ್ತು ಕೆಲ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದಕ್ಕೂ ಮುನ್ನ, ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾಗಾಂಧಿ ಭವನದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ ರಚಿಸಲು ಬಹುಮತವಿದೆ ಎಂದು ಎಲ್ಲಾ ಶಾಸಕರಿಂದ ಸಹಿ ಸಂಗ್ರಹಿಸಿದರು. ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಇಬ್ಬರು ಸರ್ಕಾರ ರಚನೆ ಕುರಿತು ಹಕ್ಕು ಮಂಡಿಸಲು ಒಂದೇ ವಾಹನದಲ್ಲಿ ರಾಜಭವನಕ್ಕೆ ತೆರಳಿದ್ದರು. ಕಾಂಗ್ರೆಸ್​​ನಿಂದ ಆಯ್ಕೆಯಾದ ಎಲ್ಲಾ 135 ಶಾಸಕರ ಸಹಿ ಒಳಗೊಂಡ ಪತ್ರದೊಂದಿಗೆ ತೆರಳಿದ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಪತ್ರ ಸಲ್ಲಿಸಿ ಪ್ರಮಾಣವಚನ ಬೋಧನೆಗೆ ಆಗಮಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ : ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನಿಸಿದ ಕಾಂಗ್ರೆಸ್​...

ಕಾಂಗ್ರೆಸ್ ಪಕ್ಷದ ಈ ಹಕ್ಕು ಪ್ರತಿಪಾದನೆಯನ್ನು ಪರಿಗಣಿಸಿದ ರಾಜ್ಯಪಾಲರು ಶನಿವಾರ ಮಧ್ಯಾಹ್ನ 12:30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭ ನೆರವೇರಿಸಿ ಕೊಡುವ ಭರವಸೆ ನೀಡಿದರು. ಕೆಲವೇ ಸಮಯದಲ್ಲಿ ರಾಜಭವನದಿಂದ ನಿಯೋಜಿತ ಮುಖ್ಯಮಂತ್ರಿ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯಗೆ ಪತ್ರ ರವಾನೆಯಾಗಿದೆ. ಅದರಲ್ಲಿ ಸಿದ್ದರಾಮಯ್ಯಗೆ ರಾಜ್ಯದ ಮುಖ್ಯಮಂತ್ರಿ ಆಗಿ ತಾವು ಪದಗ್ರಹಣ ಮಾಡುವಂತೆ ಆಹ್ವಾನಿಸುತ್ತಿದ್ದೇನೆ. ನಿಮ್ಮ ಜೊತೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಆಗಮಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

Last Updated : May 18, 2023, 10:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.