ಕಿವಿ, ಬಾಯಿ, ಕಣ್ಣು ಮುಚ್ಚಿ ಕಾವೇರಿಗಾಗಿ ಪ್ರತಿಭಟನೆ; ಹೊಸ ಮದ್ಯದಂಗಡಿ ತೆರೆಯುವುದು ಬೇಡವೆಂದು SDPI ಆಕ್ರೋಶ - ಮಹಾತ್ಮಗಾಂಧಿ ಅವರ ಜಯಂತಿ
🎬 Watch Now: Feature Video
Published : Oct 2, 2023, 4:08 PM IST
|Updated : Oct 3, 2023, 2:55 PM IST
ಚಾಮರಾಜನಗರ: ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ಮಹಾತ್ಮ ಸಾರಿದ ಸಂದೇಶವನ್ನು ಸಾರಿ ಕಾವೇರಿಗಾಗಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸ ಗೌಡ ನೇತೃತ್ವದಲ್ಲಿ ಗಾಂಧಿ ಚಿತ್ರ ಹಿಡಿದು, ರಸ್ತೆ ತಡೆ ನಡೆಸಿ ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಪ್ರತಿಭಟಿಸಿದರು.
"ಅಹಿಂಸೆಯ ಮೂಲಕ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅದರಂತೆ, ಗಾಂಧಿ ಜಯಂತಿ ದಿನ ಜೀವನದಿ ಕಾವೇರಿಗಾಗಿ ನಾವು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಕರ್ನಾಟಕಕ್ಕೆ ಕೆಟ್ಟದಾಗುವುದನ್ನು ನಾವು ನೋಡುವುದಿಲ್ಲ, ಕೇಳುವುದಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿ" ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅರ್ಧ ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಎಸ್ಡಿಪಿಐ ಪ್ರತಿಭಟನೆ: ಹೊಸ ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡುವ ಮೂಲಕ ಸಿದ್ದರಾಮಯ್ಯ ಮದ್ಯಭಾಗ್ಯ ನೀಡುತ್ತಿದ್ದಾರೆಂದು ಆರೋಪಿಸಿ ಚಾಮರಾಜನಗರದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು. ಭುವನೇಶ್ವರಿ ವೃತ್ತದಲ್ಲಿ ಪ್ಲಕಾರ್ಡ್ ಹಿಡಿದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. "ಮದ್ಯಪಾನ ವಿರೋಧಿಯಾಗಿದ್ದ ಮಹಾತ್ಮ ಗಾಂಧಿ ಅವರ ಜಯಂತಿ ಆಚರಿಸಲು ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಯಾವುದೇ ನೈತಿಕತೆ ಇಲ್ಲ. ಸಿದ್ದರಾಮಯ್ಯ ಗಾಂಧೀಜಿ ಅವರಿಗೆ ಮಾಲಾರ್ಪಣೆ ಮಾಡಬಾರದು. ಕಾಂಗ್ರೆಸ್ ಕಚೇರಿ, ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಿಸಿ ಮಹಾತ್ಮನಿಗೆ ಅಗೌರವ ಸಲ್ಲಿಸಬಾರದು" ಎಂದು ಒತ್ತಾಯಿಸಿದರು.
"ಗೃಹಲಕ್ಷ್ಮೀ ಮೂಲಕ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತೇವೆಂದು ಹೇಳುತ್ತಾರೆ. ಮತ್ತೊಂದೆಡೆ ಹೆಚ್ಚುವರಿಯಾಗಿ ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಮದ್ಯಪಾನವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ನಿಷೇಧಿಸಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!