ಮನೋರಂಜನ್ ಜೊತೆಗಿನ ಸಂಬಂಧವನ್ನು ಪ್ರತಾಪ್ ಸಿಂಹ ಮೊದಲು ಹೇಳಬೇಕು: ಎಂ.ಲಕ್ಷ್ಮಣ್
🎬 Watch Now: Feature Video
ಮೈಸೂರು: ನಿಮಗೂ ಮನೋರಂಜನ್ಗೂ ಏನು ಸಂಬಂಧ ಎಂಬುದನ್ನು ಮೊದಲು ಹೇಳಿ. ಬೇರೇನೂ ಬೇಡ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇದರೂ ತಪ್ಪು ಮಾಡಿದ್ದರೆ ಚಾಮುಂಡೇಶ್ವರಿ ತಾಯಿ ನೋಡಿಕೊಳ್ಳುತ್ತಾಳೆ, ನನ್ನ ಕ್ಷೇತ್ರದ ಜನ ನೋಡಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ನಿನ್ನೆ ಹೇಳಿದ್ದಾರೆ. ಅವರು ಹಾಗೆ ಹೇಳಿಕೊಳ್ಳಲಿ. ಆದರೆ, ಅದಕ್ಕೂ ಮೊದಲು ನಿಮಗೂ, ಮನೋರಂಜನ್ಗೂ ಏನು ಲಿಂಕು ಎಂಬುದನ್ನು ತಿಳಿಸಿ. ಆತನಿಗೆ ನೀವು ಆನ್ಲೈನ್ ಮೂಲಕ ಎಷ್ಟು ಹಣ ಕಳಿಸಿದ್ದೀರಿ ಎಂಬುದನ್ನೂ ಹೇಳಿ ಎಂದರು.
ದಶಪಥ ಕಾಮಗಾರಿಯಲ್ಲಿ ಕಮಿಷನ್ ಆರೋಪ: ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ಪ್ರತಾಪ್ ಸಿಂಹ 100 ಕೋಟಿ ರೂ.ಗೂ ಅಧಿಕ ಕಮಿಷನ್ ಹೊಡೆದಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ನೀವು ಮೊದಲು ನಿಮ್ಮ ಕಾಲದಲ್ಲಿ ಏನು ಮಾಡಿದ್ದೀರಿ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಿ. ಜನ ನಿಮಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಚಾಮುಂಡಿ ಮೇಲೆ ಭಕ್ತಿ ಇದ್ದರೆ ನೀವು ಎಷ್ಟು ಮತಗಳಿಂದ ಸೋಲುತ್ತೀರಿ ಎಂಬುದನ್ನು ಹೇಳಿ ಎಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು.
ಕಲ್ಲಡ್ಕ ಪ್ರಭಾಕರ್ ಪ್ರಚೋದನಕಾರಿ ಭಾಷಣ ವಿಚಾರ: ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಾನುವಾರ ಪ್ರಚೋದನಾ ಭಾಷಣ ಮಾಡಿದ್ದಾರೆ. ಇವರಿಗೆ ಜಿಲ್ಲಾ ಪೊಲೀಸರು ಅನುಮತಿ ಕೊಟ್ಟಿದ್ದೇಕೆ ಎಂದು ಕೇಳಿರುವ ಲಕ್ಷ್ಮಣ್, ಹಿಜಾಬ್ ವಿಚಾರದಲ್ಲಿ ಬಿಜೆಪಿಯವರ ವಿರೋಧ ಸರಿಯಲ್ಲ. ಈ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ಚರ್ಚಿಸಿ ನಿಷೇಧ ಕ್ರಮ ವಾಪಸ್ ಪಡೆಯುವುದಾದರೆ, ಖಂಡಿತ ವಾಪಸ್ ಪಡೆಯತ್ತದೆ. ಬಿಜೆಪಿ ಭಾವನಾತ್ಮಕ ವಿಚಾರವನ್ನು ಕೈಬಿಡಬೇಕು ಎಂದರು.