ಬೆಂಗಳೂರಲ್ಲಿ ಮದುಮಗ, ಮದುಮಗಳಿಗೂ ತಟ್ಟಿದ ಪ್ರಧಾನಿ ಮೋದಿ ಭದ್ರತೆ ಬಿಸಿ! - ಪೊಲೀಸರ ಜೊತೆ ಮದುಮಗನ ವಾಗ್ವಾದ
🎬 Watch Now: Feature Video
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿರುವ ರಸ್ತೆಯಲ್ಲಿನ ಭದ್ರತಾ ವ್ಯವಸ್ಥೆ ಬಿಸಿ ಮದುಮಗನಿಗೂ ತಟ್ಟಿದ್ದು, ಕಲ್ಯಾಣ ಮಂಟಪಕ್ಕೆ ಹೋಗಬೇಕಾದ ವರ ಮದುವೆ ದಿರಿಸಿನಲ್ಲೇ ರಸ್ತೆಯಲ್ಲಿ ನಿಂತು ಕೆಲಕಾಲ ಕಂಗಾಲಾದ ಘಟನೆ ನಡೆಯಿತು. ಬಳಿಕ ವರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ಕಲ್ಯಾಣ ಮಂಟಪಕ್ಕೆ ಹೋಗಲು ಅನುವು ಮಾಡಿಕೊಟ್ಟರು.
ಬೆಂಗಳೂರಲ್ಲಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ನೈಸ್ ರೋಡ್ ಜಂಕ್ಷನ್ನಿಂದ ಸುಮನಹಳ್ಳಿ ಸರ್ಕಲ್ವರೆಗೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈ ವೇಳೆ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ವರನ ಕಾರನ್ನು ತಡೆದ ಪೊಲೀಸರು, ಮುಂದೆ ಹೋಗಲು ಅನುಮತಿ ನಿರಾಕರಿಸಿದರು. ರೋಡ್ ಶೋ ಮಾರ್ಗದಲ್ಲೇ ಇದ್ದ ಕಲ್ಯಾಣ ಮಂಟಪ ಇದ್ದ ಕಾರಣ ಮದುವೆ ದಿರಿಸಿನಲ್ಲೇ ಹೂವಿನ ಹಾರದಲ್ಲಿ ಬಂದಿದ್ದರೂ ಪೊಲೀಸರು ಪರಿಗಣಿಸಿರಲಿಲ್ಲ.
ಇದರಿಂದ ಮದುಮಗ ರುದ್ರೇಶ್ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಮದುವೆಗೆ ಹೋಗುತ್ತಿದ್ದವರನ್ನು ತಡೆದಿದ್ದಕ್ಕೆ ಕಿಡಿಕಾರಿದರು. ಕೊನೆಗೆ ಮದುವೆ ಇರುವ ಬಗ್ಗೆ ಪೊಲೀಸರಿಗೆ ಹುಡುಗ ಹಾಗೂ ಕುಟುಂಬಸ್ಥರು ಮನವರಿಕೆ ಮಾಡಿಕೊಟ್ಟ ಬಳಿಕ ಕಲ್ಯಾಣ ಮಂಟಪಕ್ಕೆ ಹೋಗಲು ಪೊಲೀಸರು ಬಿಟ್ಟರು.
ಮದುಮಗಳಿಗೂ ರೋಡ್ ಶೋ ಎಫೆಕ್ಟ್: ವರನ ನಂತರ ಮದುಮಗಳಿಗೂ ಮೋದಿ ರೋಡ್ ಶೋದಿಂದ ಸುಂಕದ ಕಟ್ಟೆ ಬಳಿಯ ಕಲ್ಯಾಣ ಮಂಟಪಕ್ಕೆ ಸಾಗಲು ತೊಂದರೆಯಾಯಿತು. ಮದುಮಗಳನ್ನು ಸ್ಕೂಟರ್ನಲ್ಲಿ ಕರೆತಂದ ಕುಟುಂಬಸ್ಥರು ಮುದ್ದಣ್ಣ ಚೌಲ್ಟ್ರಿಗೆ ತೆರಳಲು ರಸ್ತೆ ದಾಟಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ರೋಡ್ ಶೋ ಭದ್ರತೆ ಕಾರಣಕ್ಕೆ ರಸ್ತೆ ಸಂಚಾರ ನಿರ್ಬಂಧದ ವಿವರ ನೀಡಿದರು. ಕಳಸ ಹಿಡಿದ ಸ್ಕೂಟರ್ನಲ್ಲಿ ಬಂದ ವಧು ಕೆಲಕಾಲ ಕಂಗಾಲಾಗಬೇಕಾಯಿತು. ಬಳಿಕ ಪೊಲೀಸರು ಮದುಮಗಳು ತೆರಳಲು ಅವಕಾಶ ಮಾಡಿಕೊಟ್ಟರು.