ಮುಂದುವರಿದ ಪಂಚರತ್ನ ಯಾತ್ರೆ: ತರಕಾರಿ, ಅಡಕೆ ಹಾರ ಹಾಕಿ ಹೆಚ್ಡಿಕೆ ಬರಮಾಡಿಕೊಂಡ ಜನ - etv bharath kannada news
🎬 Watch Now: Feature Video
ಕಾರವಾರ : ಉತ್ತರ ಕನ್ನಡದಲ್ಲಿ 2ನೇ ದಿನವೂ ಪಂಚರತ್ನ ರಥಯಾತ್ರೆ ಮುಂದುವರೆದಿದೆ. ಕುಮಟಾದ ತಲಗೇರಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚಂದಾವರದಿಂದ ಹೊನ್ನಾವರ ಹಾಗೂ ಭಟ್ಕಳದತ್ತ ಯಾತ್ರೆ ಆರಂಭಿಸಿದ್ದಾರೆ.
ತಲಗೇರಿ ಗ್ರಾಮದ ವನದುರ್ಗ ದೇವಾಲಯದಲ್ಲಿ ಕುಮಾರಸ್ವಾಮಿ ಹಾಗೂ ಗ್ರಾಮದ ಮುಖಂಡರ ಜೊತೆ ಪೂಜೆ ಸಲ್ಲಿಸಿದರು. ಸಿಎಂ ಇದ್ದ ವೇಳೆ, ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭವನ್ನು ನೆನೆಪುಮಾಡಿಕೊಂಡರು. ಇನ್ನು ನಿನ್ನೆ ಪಂಚರತ್ನ ರಥಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾದ ಬೆನ್ನಲ್ಲೆ ಇಂದು ಕುಮಟಾದ ಚಂದಾವರ, ಹೊನ್ನಾವರ ತಾಲೂಕಿನಲ್ಲಿ ಸಂಚರಿಸಿ ಕುಮಟಾ ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಪರ ಪ್ರಚಾರ ಕೈಗೊಂಡಿದ್ದಾರೆ.
ಅಡಕೆ ಹಾಗೂ ತರಕಾರಿ ಹಾರ: ಇನ್ನು ಪಂಚರತ್ನ ಯಾತ್ರೆಯಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕುಮಟಾದ ಕಾಗಲ್ ಭಾಗದ ಜನರು ನಿನ್ನೆ ರಾತ್ರಿ ಬೃಹತ್ ಗಾತ್ರದ ಅಡಕೆ ಹಾರ ಹಾಕಿ ಸ್ವಾಗತ ಮಾಡಿದರು. ಬಳಿಕ ವಿವಿಧ ಬಗೆಯ ತರಕಾರಿಗಳಿಂದ ಮಾಡಿದ ಯಕ್ಷಗಾನ ಕಿರೀಟದ ಹಾರವನ್ನು ಸಹ ಹಾಕಿ ಸ್ವಾಗತಿಸಿದರು.
ಅಧಿಕಾರಕ್ಕೆ ಬಂದರೆ ಸುಗ್ಗಿ ಕುಣಿತಕ್ಕೆ ಪ್ರೋತ್ಸಾಹ : ಕುಮಟಾ ತಾಲೂಕಿನಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ವಾಸ್ತವ್ಯಕ್ಕೆ ಆಗಮಿಸಿದ್ದ ಅವರನ್ನು ಅಘನಾಶಿನಿ ಗ್ರಾಮದಲ್ಲಿ ಸುಗ್ಗಿ ಕುಣಿತದ ಮೂಲಕ ಮಕ್ಕಳು ಸ್ವಾಗತ ಕೋರಿದರು. ಕುಮಾರಸ್ವಾಮಿ ಸುಗ್ಗಿ ಕುಣಿತ ವೀಕ್ಷಿಸಿ ಕೂಡ ಸಂತಸ ವ್ಯಕ್ತಪಡಿಸಿದರು. ಈ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಅಘನಾಶಿನಿಯ ಸುಗ್ಗಿ ಕುಣಿತಕ್ಕೆ ಅಗತ್ಯ ಪ್ರೋತ್ಸಾಹ ಕೊಡುತ್ತೇನೆ ಎಂದು ಸಹ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಇದನ್ನೂ ಓದಿ : ಹೆಚ್ಡಿಕೆಯದ್ದು ಜಾತಿ ರಾಜಕಾರಣ.. ಜೋಶಿ ಸಿಎಂ ಅಗ್ಬಾರ್ದು ಅಂತೇನಿಲ್ಲ: ಶಾಸಕ ರಘುಪತಿ ಭಟ್