ಮರಾಠ ಮೀಸಲಾತಿ ಕಿಚ್ಚು: ಸಚಿವರ ಕಾರಿನ ಗಾಜು ಧ್ವಂಸ, ಪುಣೆ-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ- ವಿಡಿಯೋ - ಕಾರ್ಮಿಕ ಸಂಘಟನೆಗಳಿಂದ ಬಂದ್ಗೆ ಕರೆ
🎬 Watch Now: Feature Video


Published : Nov 1, 2023, 11:03 AM IST
ಮುಂಬೈ (ಮಹಾರಾಷ್ಟ್ರ): ಮರಾಠ ಮೀಸಲಾತಿ ಸಂಬಂಧ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಮರಾಠ ಮೀಸಲಾತಿಗೆ ಒತ್ತಾಯಿಸಿ ಇಂದು ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿವೆ.
ಮೀಸಲಾತಿ ಸಂಬಂಧ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಇಬ್ಬರು ದುಷ್ಕರ್ಮಿಗಳು ಸಚಿವರ ಕಾರಿನ ಗಾಜಿಗೆ ಹಾನಿ ಮಾಡಿದರು. ಮುಂಬೈನ ಕೊಲಬಾದ ಆಕಾಶವಾಣಿ ಕೇಂದ್ರದ ಬಳಿ ಎನ್ಸಿಪಿ ನಾಯಕ, ಸಚಿವ ಹಸನ್ ಮುಶ್ರಿಫ್ ಅವರ ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರಿಗೆ ಹಾನಿ ಮಾಡಲಾಗಿದೆ. ವಿಡಿಯೋದಲ್ಲಿ ಇಬ್ಬರು ಮರಾಠ ಮೀಸಲಾತಿ ಪರ ಘೋಷಣೆ ಕೂಗುವುದನ್ನು ನೋಡಬಹುದು. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳಿಂದ ಬಂದ್ ಕರೆ: ಮರಾಠ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಬಂದ್ಗೆ ಕರೆ ನೀಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕಾರ್ಮಿಕ ಸಂಘಟನೆ ಒಕ್ಕೂಟದ ಅಧ್ಯಕ್ಷ ಸಂತೋಷ್ ನಗರೆ, "ಮರಾಠಿ ಜನರಿಗೆ ಮೀಸಲಾತಿ ಲಭಿಸಬೇಕು. ಮೀಸಲಾತಿ ಸಂಬಂಧ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಕಳೆದ ಎಂಟು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ನಾವು ಬಂದ್ಗೆ ಕರೆ ನೀಡಿದ್ದೇವೆ" ಎಂದು ಹೇಳಿದರು. ಬಂದ್ನಿಂದಾಗಿ ಛತ್ರಪತಿ ಶಿವಾಜಿ ಮಾರ್ಕೆಟ್ ಭಣಗುಟ್ಟುತ್ತಿತ್ತು.
ಕಳೆದ ಆಗಸ್ಟ್ ತಿಂಗಳಿನಿಂದ ಮರಾಠ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದೆ. ಇದೀಗ ಈ ಹೋರಾಟ ಮನೋಜ್ ಜಾರಂಗೆ ಅವರ ಅನಿರ್ದಿಷ್ಟಾವಧಿ ಮುಷ್ಕರದಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೇ ವೇಳೆ ಪ್ರತಿಭಟನಾಕಾರರು ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದರು. ಕರ್ನಾಟಕ ಸಾರಿಗೆ ಬಸ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕರ್ನಾಟಕ ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಕರ್ನಾಟಕ ಸಾರಿಗೆ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ: ಇಲ್ಲಿನ ನಾವಲೆ ಸೇತುವೆ ಬಳಿ ನೂರಾರು ಪ್ರತಿಭಟನಾಕಾರರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹೆದ್ದಾರಿಯಲ್ಲಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು. ಇದರಿಂದಾಗಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚು: ಕರ್ನಾಟಕದ ಬಸ್ಗೆ ಬೆಂಕಿ.. ಮಹಾರಾಷ್ಟ್ರಕ್ಕೆ ಸಂಚಾರ ತಾತ್ಕಾಲಿಕ ಸ್ಥಗಿತ