ಮೈಸೂರು: ಗೊಮ್ಮಟಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ
🎬 Watch Now: Feature Video
Published : Nov 26, 2023, 8:56 PM IST
ಮೈಸೂರು : ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿಯಲ್ಲಿ ವಿರಾಜಮಾನವಾಗಿ ನಿಂತಿರುವ ಬಾಹುಬಲಿ ಸ್ವಾಮಿಗೆ 74ನೇ ವರ್ಷದ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ಜರುಗಿತು. ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಿದ್ಧಾಂತ ಭಟ್ಟಾರಕ ಸ್ವಾಮೀಜಿ ಮತ್ತು ವರೂರು ಧರ್ಮಸೇನ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಹಾಮಸ್ತಕಾಭಿಷೇಕವು ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ವಿಧಿ-ವಿಧಾನಗಳ ನಂತರ ಬೆಟ್ಟದ ಮೇಲಿನ 18 ಅಡಿ ಎತ್ತರದ ಬಾಹುಬಲಿ ಸ್ವಾಮಿ ಮೂರ್ತಿಗೆ ಭಕ್ತರು ನಾನಾ ಅಭಿಷೇಕ ನೆರವೇರಿಸಿದರು.
ಗೊಮ್ಮಟೇಶ್ವರನಿಗೆ ಮೊದಲಿಗೆ ಜಲಾಭಿಷೇಕ, ಬಳಿಕ ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆಪುಡಿ, ಅಕ್ಕಿ ಹಿಟ್ಟು, ಜೇನುತುಪ್ಪ, ಶ್ರೀಗಂಧ, ಹೀಗೆ ವಿವಿಧ ಕಷಾಯಾಭಿಷೇಕ ಸೇರಿದಂತೆ ಒಟ್ಟು 18 ಬಗೆಯ ಅಭಿಷೇಕಗಳನ್ನು ನೆರವೇರಿಸಲಾಯಿತು. ಪ್ರತಿ ಅಭಿಷೇಕವನ್ನೂ ಕಣ್ತುಂಬಿಕೊಂಡ ಭಕ್ತರು ವಿರಾಟ್ ಯೋಗಿ ಬಾಹುಬಲಿ ಮಹಾರಾಜ್ ಕೀ ಜೈ ಎನ್ನುತ್ತಾ ಜಯಘೋಷ ಮೊಳಗಿಸಿದರು.
ರಾಜ್ಯದ ವಿವಿಧೆಡೆಗಳಿಂದ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಸಾವಿರಾರು ಮಂದಿ ಗ್ರಾಮಸ್ಥರು ಮಸ್ತಕಾಭಿಷೇಕವನ್ನು ಕಣ್ತುಂಬಿಕೊಂಡರು. ಗೊಮ್ಮಟಗಿರಿ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಎಸ್. ಡಿ ಮನ್ಮಥ್ ರಾಜ್, ಕಾರ್ಯದರ್ಶಿ ಪದ್ಮರಾಜಯ್ಯ, ಖಜಾಂಚಿ ರಾಜೇಶ್, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಹಾಗೂ ಮಸ್ತಕಾಭಿಷೇಕ ಜರುಗಿತು. ಅಭಿಷೇಕಕ್ಕೂ ಮೊದಲಿಗೆ ಸ್ವಾಮೀಜಿ ಹಾಗೂ ಕ್ಷುಲಿಕಾ ಶ್ರೀವಿನಯ ಶ್ರೋಮಾತಾಜಿ ಆಶೀರ್ವಚನ ನೀಡಿದರು. ಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತರಿಗೆ ದಾನಿಗಳು ಅನ್ನಸಂತರ್ಪಣೆ ನಡೆಸಿಕೊಟ್ಟರು. ಬಿಳಿಕೆರೆ ಠಾಣೆಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ವ್ರತ-ನಿಯಮಗಳ ಪಾಲನೆಯಿಂದ ಮನೆಯೇ ಮಂದಿರವಾಗುತ್ತದೆ: ಲಲಿತ ಕೀರ್ತಿ ಭಟ್ಟಾರಕ ಸ್ವಾಮೀಜಿ