ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ - ವಿಡಿಯೋ
🎬 Watch Now: Feature Video
ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 5 ಸಾವಿರಕ್ಕೂ ಅಧಿಕ ಶಿವ ಭಕ್ತರು ವಿಶ್ವ ಪ್ರಸಿದ್ಧ ಮುರುಡೇಶ್ವರದ ಶಿವನ ದೇಗುಲಕ್ಕೆ ಬರಿಗಾಲಿನಲ್ಲಿ ಸುಮಾರು 18 ಕಿಲೋ ಮೀಟರ್ ಪಾದಯಾತ್ರೆ ಮಾಡಿ, ದೇವರ ದರ್ಶನ ಪಡೆದು ವಿಶೇಷತೆ ಮೆರೆದರು. ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಪ್ರತಿ ವರ್ಷವೂ ಶಿವರಾತ್ರಿಯಂದು ಭಟ್ಕಳದಿಂದ ಮುರುಡೇಶ್ವರಕ್ಕೆ ಪಾದಯಾತ್ರೆ ಆಯೋಜಿಸಲಾಗುತ್ತದೆ. ನಸುಕಿನ ಜಾವ 4 ಗಂಟೆಗೆ ಭಟ್ಕಳ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದು ಪಾದಯಾತ್ರೆ ಕೈಗೊಂಡ ಭಕ್ತರು, ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರುಡೇಶ್ವರ ದೇವಸ್ಥಾನಕ್ಕೆ ತಲುಪಿದರು.
ಭಕ್ತಾದಿಗಳು ಬರಿ ಕಾಲಿನಲ್ಲಿಯೇ ನಡೆದಿದ್ದು, ದಾರಿಯುದ್ದಕ್ಕೂ ಶಿವ ನಾಮಸ್ಮರಣೆ, ಶಿವ ಸ್ತುತಿಯೊಂದಿಗೆ ಜಯಘೋಷ ಮತ್ತು ರಾಮ ಭಜನೆ ಹಾಡಿದರು. ಪುರುಷರು ಪಂಚೆ, ಶಾಲು ಹಾಗೂ ಮಹಿಳೆಯರು ಬೂದು ಬಣ್ಣದ ಸೀರೆಯನ್ನು ಧರಿಸಿ ಯಾತ್ರೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ಪುಟಾಣಿ ಮಕ್ಕಳು ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಬಳಿಕ ಸಮುದ್ರ ಸ್ನಾನ ಮಾಡಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದರು. ಕಳೆದ 13 ವರ್ಷಗಳಿಂದ ಈ ಪಾದಯಾತ್ರೆ ನಡೆಯುತ್ತಿದ್ದು, ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಶಿವನ ಪಂಚಕ್ಷೇತ್ರಗಳಲ್ಲೊಂದಾದ ಶ್ರೀ ಮುರ್ಡೇಶ್ವರ ದೇವರಿಗೆ ಶಿವರಾತ್ರಿಯ ನಿಮಿತ್ತ ನಸುಕಿನ ವೇಳೆ 4 ಗಂಟೆಯಿಂದಲೇ ಪೂಜೆ ಪ್ರಾರಂಭವಾಗಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಸಮುದ್ರತೀರ ಮತ್ತು ದೇವಸ್ಥಾನದ ಸುತ್ತಮುತ್ತ ಜನಜಾತ್ರೆಯೇ ನೆರೆದಿತ್ತು. ಇನ್ನು ತಾಲೂಕಿನ ವಿವಿಧೆಡೆ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಚೋಳೇಶ್ವರ, ಬಂದರ್‌ನ ಕುಟುಮೇಶ್ವರ, ಮಾರುಕೇರಿಯಲ್ಲಿ ಇರುವ ಈಶ್ವರ ದೇವಸ್ಥಾನ, ಸೋನಾರಕೇರಿಯಲ್ಲಿ ಇರುವ ವಿರೂಪಾಕ್ಷ ದೇವಸ್ಥಾನಗಳಿಗೆ ಸ್ಥಳೀಯ ಭಕ್ತರು ಭೇಟಿ ನೀಡಿ ಪೂಜೆ ಪುನಸ್ಕಾರ ಸಲ್ಲಿಸಿದರು.
ಇದನ್ನೂ ಓದಿ: ಗಂಗಾ ನದಿ ತಟದ ಶಿವಾಲಯದಲ್ಲಿ ಭಕ್ತರ ದಂಡು: ಭೋಲೆನಾಥನ ಜಪ