ವರ್ಗಾವಣೆಗೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ KSRTC ಚಾಲಕ - KSRTC driver tried to commit suicide
🎬 Watch Now: Feature Video
ಮಂಡ್ಯ: ವರ್ಗಾವಣೆಗೆ ಮನನೊಂದು ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ನಾಗಮಂಗಲದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹೆಚ್.ಆರ್ ಜಗದೀಶ್ ಎಂದು ಗುರುತಿಸಲಾಗಿದೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಾಗಮಂಗಲದ ಕೆಎಸ್ಆರ್ಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಹೆಚ್.ಆರ್ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಇಂದು ಜಗದೀಶ್ ಅವರಿಗೆ ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ವರ್ಗಾವಣೆ ಆದೇಶ ತೆಗೆದುಕೊಳ್ಳದೇ ಜಗದೀಶ್ ನಾಗಮಂಗಲ ಬಸ್ ಡಿಪೋ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಸಿಬ್ಬಂದಿ ಯತ್ನಿಸಿದರೂ ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂಬುದಾಗಿ ಹಠ ಹಿಡಿದಿದ್ದಾರೆ. ಕೊನೆಗೆ ಜಗದೀಶ್ ಅವರ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವರ್ಗಾವಣೆಗೆ ರಾಜಕೀಯ ಒತ್ತಡವೇ ಕಾರಣ ಎಂದು ಜಗದೀಶ್ ಅವರ ತಂದೆ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಪೋ ಉಸ್ತುವಾರಿ ಮಂಜುನಾಥ್, ’’ಚಾಲಕ ಜಗದೀಶ್ ಮಹಿಳಾ ಪ್ರಯಾಣಿಕರ ಜೊತೆ ಅನುಚಿತ ವರ್ತನೆ ತೋರಿರುವುದಾಗಿ ದೂರು ಬಂದಿತ್ತು. ಆ ದೂರಿನ ಅನ್ವಯ ಅವರನ್ನು ವರ್ಗಾವಣೆ ಮಾಡಲಾಗಿದೆ‘‘ಎಂದು ಹೇಳಿದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ರಜ್ಞೆ ತಪ್ಪಿದ ಹಾವಿಗೆ ನೀರು ಕೊಟ್ಟು ಕಾಪಾಡಿದ ಸಾಮಾಜಿಕ ಕಾರ್ಯಕರ್ತ: ವಿಡಿಯೋ