ಡಿಕ್ಕಿ ಹೊಡೆದು 100 ಮೀಟರ್ ಎಳೆದೊಯ್ದ ಕಾರು: ಪವಾಡ ಸದೃಶದಂತೆ ವೃದ್ಧೆ ಪಾರು
🎬 Watch Now: Feature Video
ರಾಂಚಿ (ಜಾರ್ಖಂಡ್): ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಅಂದಾಜು 100 ಮೀಟರ್ಗೂ ಅಧಿಕ ದೂರ ಎಳೆದೊಯ್ದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ. ಪವಾಡ ಸದೃಶ ಎಂಬಂತೆ ಹಿರಿಜೀವ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಮೊರಾಬಾದಿ ಪ್ರದೇಶದ ನಿವಾಸಿ, 67 ವರ್ಷದ ಶಕುಂತಲಾ ದೇವಿ ನಮ್ಮ ಮನೆಯತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಕಾರೊಂದು ಬಂದು ಗುದ್ದಿದೆ. ಕಾರಿಗೆ ಕಾಲು ಸಿಲುಕಿಕೊಂಡಿತ್ತು. ಆದರೆ, ರಕ್ಷಿಸುವ ಬದಲಿಗೆ ಚಾಲಕ ತಾನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಾರಿನ ವೇಗ ಹೆಚ್ಚಿಸಿಕೊಂಡು ಹೋಗಿದ್ದಾನೆ. ಹೀಗೆ ಸುಮಾರು 100 ಮೀಟರ್ನಷ್ಟು ದೂರ ವೃದ್ಧೆಯನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ.
ಚಾಲಕನ ಅಮಾನವೀಯ ವರ್ತನೆಗೆ ಆಕ್ರೋಶಗೊಂಡು ರಸ್ತೆಯಲ್ಲಿ ಆತನನ್ನು ಹಿಡಿದು ಥಳಿಸಿದ್ದಾರೆ. ಕಾರನ್ನು ಪಲ್ಟಿ ಹೊಡೆಸಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಜನರ ಕೈಯಿಂದ ಬಿಡಿಸಿಕೊಂಡಿದ್ದಾರೆ. ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಚಾಲಕ ವಿಕಲಚೇತನವಾಗಿದ್ದು, ಬ್ಯಾಂಕ್ ಉದ್ಯೋಗಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ರೈಲು ಡಿಕ್ಕಿಯಾಗಿ ಕರ್ನಾಟಕದ ಮೂವರು ವಿಶೇಷಚೇತನ ಬಾಲಕರು ಸಾವು