ಸಾಂಸ್ಕೃತಿಕ ನಗರಿಯಲ್ಲಿ ಜಿಟಿಜಿಟಿ ಮಳೆ: ಜನಜೀವನ ಅಸ್ತವ್ಯಸ್ತ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಮೈಸೂರು : ಕಳೆದ ಎರಡು ದಿನಗಳಿಂದ ಕೇರಳದ ವೈನಾಡು ಹಾಗೂ ಮಡಿಕೇರಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾಗಿದೆ. ಇದರ ಪರಿಣಾಮ ಮೈಸೂರು ನಗರ ಹಾಗೂ ಜಿಲ್ಲಾ ಭಾಗದಲ್ಲಿ ತುಂತುರು ಮಳೆ ಆಗುತ್ತಿದ್ದು, ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಹೋಗಲು ಮತ್ತು ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಆದರೂ ಈ ಮಳೆಯಿಂದ ಸಂತಸಗೊಂಡಿರುವ ರೈತಾಪಿ ವರ್ಗ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಮಡಿಕೇರಿ ಭಾಗಗಳಲ್ಲಿ ಮಳೆ ಹೆಚ್ಚಾದ ಪರಿಣಾಮ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ಚುಂಚನಕಟ್ಟೆ ಬಳಿಯ ಧನುಷ್ಕೋಟಿ ಜಲಪಾತದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜೂನ್ ಅಂತ್ಯದವರೆಗೂ ನೀರಿನ ಹರಿವಿಲ್ಲದೇ ಮಂಕಾಗಿದ್ದ ಈ ಜಲಾಶಯ ವರ್ಷಧಾರೆಯಿಂದ ಕಳೆಗಟ್ಟಿದ್ದು, 65 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿರುವ ಧನುಷ್ಕೋಟಿ ಜಲಪಾತ, ಹಾಲಿನ ನೊರೆಯಂತೆ ರಭಸವಾಗಿ ಹರಿಯುತ್ತಿದೆ. ಜೊತೆಗೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇದರಿಂದ ಚುಂಚನಕಟ್ಟೆಯ ಧನುಷ್ಕೋಟಿ ಜಲಾಶಯ ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಲ್ಲಿನ ಅಕ್ಕಪಕ್ಕದಲ್ಲಿ ಇರುವ ವ್ಯಾಪಾರಿಗಳ ವ್ಯಾಪಾರ ವಹಿವಾಟು ಚುರುಕಾಗಿದೆ.
ಇದನ್ನೂ ಓದಿ : ಸೊರಬ: ಭಾರಿ ಗಾಳಿಮಳೆಗೆ ಉರುಳಿ ಬಿದ್ದ ತೆಂಗಿನ ಮರ.. ಮನೆ-ಕಾರಿಗೆ ಹಾನಿ