ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸುರಿದ ಮಳೆ: ರೈತರ ಮೊಗದಲ್ಲಿ ಮಂದಹಾಸ.. ನಗರದಲ್ಲಿ ಅವಾಂತರ - ವಾಹನ ಸವಾರರು ಪರದಾಡುವ ದೃಶ್ಯ
🎬 Watch Now: Feature Video
Published : Sep 26, 2023, 6:06 PM IST
|Updated : Sep 26, 2023, 7:44 PM IST
ಹುಬ್ಬಳ್ಳಿ : ಕಳೆದ ಕೆಲವು ದಿನಗಳಿಂದ ಬಿಸಿಲಿನಿಂದ ಬಳಲಿದ ವಾಣಿಜ್ಯ ನಗರಿಗೆ ಮಳೆರಾಯ ತಂಪೆರೆದಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿತ್ತು. ಮಳೆ ಇಲ್ಲದೆ ಬೆಳೆಗಳೆಲ್ಲ ಕಮರಿ ಹೋಗಿದ್ದವು. ಹಿಂಗಾರು ಮಳೆ ಕೂಡಾ ಕೈಕೊಡುವ ಆತಂಕ ರೈತಾಪಿ ವರ್ಗವನ್ನು ಕಾಡಿತ್ತು. ಆದ್ರೆ ಇಂದು ಸುರಿದ ಮಳೆ ಅನ್ನದಾತರಿಗೆ ಅಲ್ಪಸ್ವಲ್ಪ ಭರವಸೆ ಮೂಡಿಸಿದೆ. ಸೋಮವಾರ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಉತ್ತರ ಕರ್ನಾಟಕ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ.
ವಾಹನ ಸವಾರರ ಪರದಾಟ: ಆದ್ರೆ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆ ಜಿಲ್ಲೆಯ ಜನರಲ್ಲಿ ಮಂದಹಾಸ ಮೂಡಿಸಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ವಾಹನ ಸವಾರರು ಪರದಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಇನ್ನು ನಗರದ ಹಲವು ಕಡೆ ರಸ್ತೆಯಲ್ಲಿ ಮೊಣಕಾಲು ಉದ್ದ ನೀರು ಹರಿದಿದೆ. ಚಂದ್ರನಾಥ ನಗರದ ವಿಜಯ ಹೋಟೆಲ್ ಹಿಂಭಾಗದಲ್ಲೂ ಕೂಡ ರಸ್ತೆಯಲ್ಲಿ ಚರಂಡಿ ನೀರು ಹರಿದು ಸಾರ್ವಜನಿಕರು ಪರದಾಡುವ ದೃಶ್ಯಗಳು ಕಂಡುಬಂದವು.
ಗಣೇಶ ಮಂಟಪಕ್ಕೆ ನುಗ್ಗಿದ ಚರಂಡಿ ನೀರು : ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಗಣೇಶ ಮಂಟಪಕ್ಕೆ ಮಳೆ ನೀರು ನುಗ್ಗಿದ ಘಟನೆ ಹುಬ್ಬಳ್ಳಿಯ ತುಳಜಾ ಭವಾನಿ ಸರ್ಕಲ್ ಬಳಿ ನಡೆದಿದೆ. ಸರಿಯಾಗಿ ಮಳೆ ನೀರು ಹರಿದು ಹೋಗಲು ಒಳಚರಂಡಿ ಸ್ವಚ್ಚಗೊಳಿಸದೆ ಇರುವುದೇ ಇಂತಹ ಅವಾಂತರಕ್ಕೆ ಕಾರಣವಾಗಿದ್ದು, ಗಣೇಶ ಮಂಟಪಕ್ಕೆ ಮಳೆಯ ನೀರು ಹಾಗೂ ಚರಂಡಿ ನೀರು ನುಗ್ಗಿದ್ದು, ಅವ್ಯವಸ್ಥೆ ಸೃಷ್ಟಿಯಾಗಿದೆ.
ಈಗಾಗಲೇ ಅವಳಿನಗರದಲ್ಲಿ ಇಂತಹ ಸಾಕಷ್ಟು ಸಮಸ್ಯೆಗಳಿವೆ. ಹೀಗಿದ್ದರೂ ಕೂಡ ಸ್ಥಳೀಯ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆ ಸೂಕ್ತ ಕ್ರಮಗಳನ್ನು ಜರುಗಿಸದೇ ಇರುವ ಕಾರಣ ಗಣಪತಿ ಮಂಟಪಕ್ಕೆ ನೀರು ನುಗ್ಗಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಶಾಲೆ ಬಿಡುವ ಟೈಮಿನಲ್ಲಿಯೇ ಮಳೆ ಜೋರಾಗಿದ್ದು, ವಿದ್ಯಾರ್ಥಿಗಳು ನೀರಿನಲ್ಲಿ ಪರದಾಡುವಂತಾಗಿದೆ.
ಇದನ್ನೂ ಓದಿ: ಮತ್ತೆ ಚುರುಕಾದ ನೈರುತ್ಯ ಮುಂಗಾರು; ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..