Rain in Delhi: ದೆಹಲಿಯಲ್ಲಿ ಗಾಳಿ ಸಹಿತ ಭಾರಿ ಮಳೆ
🎬 Watch Now: Feature Video
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ತಾಪಮಾನ ಏರಿಕೆಯಿಂದ ಜನರು ತತ್ತರಿಸಿದ್ದರು. ಶುಕ್ರವಾರ ಮುಂಜಾನೆಯಿಂದಲೇ ಮಳೆ ಆಗುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ದಕ್ಷಿಣ ದೆಹಲಿಯ ಖಾನ್ಪುರ, ಸಂಗಮ್ ವಿಹಾರ್, ಲಜಪತ್ ನಗರ, ಮಾಳವೀಯ ನಗರ, ಸಾಕೇತ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬಳಿಕ ಧಾರಾಕಾರ ಮಳೆಯಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ದೆಹಲಿ-ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಮತ್ತು ಸಾಧಾರಣ ಮಳೆಯಾಗಿದೆ. ಈ ಅವಧಿಯಲ್ಲಿ ಗಂಟೆಗೆ 50 ರಿಂದ 70 ಕಿಮೀ ವೇಗದಲ್ಲಿ ಗಾಳಿ ಕೂಡ ಬೀಸಲಿದೆ. ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಫರಿದಾಬಾದ್, ಮನೇಸರ್, ಬಲ್ಲಭಗಢ್ ಮುಂತಾದ ಪ್ರದೇಶಗಳಲ್ಲಿ ಸಾಧಾರಣ ಮತ್ತು ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.
ಶುಕ್ರವಾರ ಬೆಳಗ್ಗೆ ಆಗುತ್ತಿದ್ದಂತೆಯೇ ಕಾರ್ಮೋಡ ಆವರಿಸಿತ್ತು. ಕ್ಷಣಮಾತ್ರದಲ್ಲಿ ವಾತಾವರಣ ಬದಲಾಗಿದ್ದು, ಗಾಳಿ ಸಹಿತ ಮಳೆ ಆಗಿದೆ. ಮಳೆಯಿಂದ ಶಾಲೆಗೆ ಹೋಗುವ ಮಕ್ಕಳಿಂದ, ಕಚೇರಿ ಕೆಲಸಕ್ಕೆ ತೆರಳುವವರು ಹಾಗೂ ಬೆಳಗಿನ ವಾಕಿಂಗ್ ತೆರಳಿದ್ದವರು ಪರದಾಡುವಂತಾಗಿತ್ತು.
ಹವಾಮಾನ ಇಲಾಖೆ ಪ್ರಕಾರ, ಗುರುವಾರ ಗರಿಷ್ಠ ತಾಪಮಾನ 37.6 ಡಿಗ್ರಿ ದಾಖಲಾಗಿದೆ. ಕನಿಷ್ಠ ತಾಪಮಾನ 27.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಇದು ಸಾಮಾನ್ಯಕ್ಕಿಂತ 3 ಡಿಗ್ರಿ ಹೆಚ್ಚಾಗಿದೆ. ಸದ್ಯ ದೆಹಲಿಯ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ.
ಇದನ್ನೂ ಓದಿ: ದಸರಾ ಗಜಪಡೆಗೆ ಮಹಾಮಜ್ಜನ.. ಈಟಿವಿ ಭಾರತ ಪ್ರತ್ಯಕ್ಷ ವರದಿ