ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಯ ಪಕ್ಕದ ತಡೆಗೋಡೆ ಕುಸಿತ, ಮುರಿದು ಬಿದ್ದ ಮನೆಯ ಛಾವಣಿ - ಕಳಸ ಗ್ರಾಮ ಪಂಚಾಯಿತಿ
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನಲ್ಲಿ ಅನೇಕ ಅವಘಡಗಳು ಸಂಭವಿಸಿದೆ. ಜಿಲ್ಲೆಯ ಕಳಸ ತಾಲೂಕಿನ ಓಣಿಗಂಡಿಯ ಮಾಸ್ಟರ್ ಡೊಂಗ್ರೆ ಅವರ ಮನೆಯ ಪಕ್ಕ ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಮನೆಯ ಪಕ್ಕದಲ್ಲಿ ನಿಧಾನವಾಗಿ ಭೂಮಿ ಬಿರುಕು ಬಿಡುತ್ತಿದೆ.
ಮನೆಯ ಪಕ್ಕ ಹಾಗೂ ಸುತ್ತಮುತ್ತ ನಿಧಾನವಾಗಿ ಮಣ್ಣು ಜರುಗುತ್ತಿದ್ದು, ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಕಳಸ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಣ್ಣು ಜರಿದ ಜಾಗಕ್ಕೆ ಟಾರ್ಪಲ್ ಮುಚ್ಚಿದ್ದಾರೆ. ಇನ್ನು ಎರಡು ಅಡಿ ಮಣ್ಣು ಜರುಗಿದರೆ ಮನೆ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ.
ಕಳಸ ತಾಲೂಕಿನ ಮತ್ತೊಂದು ಭಾಗದಲ್ಲಿ ಧಾರಾಕಾರ ಮಳೆಯಿಂದ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಕೊನೆಗೂಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನೀಲಮ್ಮ ಎಂಬುವರ ಮನೆ ಛಾವಣಿ ಸಂಪೂರ್ಣ ಕುಸಿತ ಉಂಟಾಗಿದೆ. ಶೇ.65 ರಷ್ಟು ಮನೆಯ ಛಾವಣಿ ಸಂಪೂರ್ಣ ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಮನೆಯಲ್ಲಿನ ವಸ್ತುಗಳು ನಾಶವಾಗಿದೆ. ಮನೆಯ ಮೇಲ್ಚಾವಣಿ ಕುಸಿಯುತ್ತಿದ್ದಂತೆ ಮನೆಯಿಂದ ಕುಟುಂಬ ಸದಸ್ಯರು ಹೊರ ಬಂದಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹೇಮಾವತಿ ನದಿಯಲ್ಲಿ ವೃದ್ಧೆಯ ಶವ ಪತ್ತೆ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ