ಕಾಂಗ್ರೆಸ್ ಟಿಕೆಟ್ ಮಿಸ್ : ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗೋಪಿಕೃಷ್ಣ - ತರೀಕೆರೆ ವಿಧಾನಸಭಾ ಕ್ಷೇತ್ರ
🎬 Watch Now: Feature Video
ಚಿಕ್ಕಮಗಳೂರು : ರಾಜ್ಯ ರಾಜಕಾರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರ ಭಾರಿ ಕುತೂಹಲ ಮೂಡಿಸಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ 13 ಜನ ಅಭ್ಯರ್ಥಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರಮುಖವಾಗಿ ಜಿ ಹೆಚ್ ಶ್ರೀನಿವಾಸ್ ಹಾಗೂ ಗೋಪಿಕೃಷ್ಣ ನಡುವೆ ಭಾರಿ ಫೈಟ್ ನಡೆದಿತ್ತು. ನಿನ್ನೆ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ, ಕೊನೆಗೂ ಶ್ರೀನಿವಾಸ್ಗೆ ಮಣೆ ಹಾಕಿದೆ. ಟಿಕೆಟ್ ಕೈತಪ್ಪಿರುವ ಹಿನ್ನೆಲೆ ಗೋಪಿಕೃಷ್ಣ ಕಣ್ಣೀರು ಹಾಕುತ್ತಿದ್ದಾರೆ. ಸಾವಿರಾರು ಬೆಂಬಲಿಗರು ಅವರ ಮನೆಗೆ ಆಗಮಿಸಿ ಸಮಾಧಾನ ಮಾಡುತ್ತಿದ್ದಾರೆ.
ಬೆಂಬಲಿಗರು ಬಂದಾಗ ಗೋಪಿಕೃಷ್ಣ ಹಾಗೂ ಅವರ ಧರ್ಮಪತ್ನಿ ಕಣ್ಣೀರು ಹಾಕಿದ್ದು, ಸಣ್ಣ ಸಣ್ಣ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲ. ಪಕ್ಷ ಹೇಳಿದ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಆದರೂ, ಕೊನೆಗೆ ನನ್ನ ಹೆಸರು ಕೈ ಬಿಟ್ಟಿದ್ದಾರೆಂದು ಅಸಮಾಧಾನ ಹೊರಹಾಕಿದರು. ಬಳಿಕ ಮಾಧ್ಯಮಗಳ ಜೊತೆ ಕಣ್ಣೀರು ಹಾಕುತ್ತಾ ಮಾತನಾಡಿದ ಗೋಪಿಕೃಷ್ಣ, "ನನ್ನ ಟಿಕೆಟ್ ತಪ್ಪಲು ಬೈರತಿ ಸುರೇಶ್ ಕಾರಣ, 2013 ರಿಂದ ಮೂರು ಪಕ್ಷದಿಂದ ಆನ್ಯಾಯ ಅಗಿದೆ. 2013 ರಲ್ಲಿ ಜೆಡಿಎಸ್, 2018 ಬಿಜೆಪಿ, 2023 ಕ್ಕೆ ಕಾಂಗ್ರೆಸ್ನಿಂದ ಆನ್ಯಾಯ ಆಗಿದೆ" ಎಂದರು.
"ನನ್ನ ಸಣ್ಣ ಸಣ್ಣ ಸಮುದಾಯದ ಹಿತೈಷಿಗಳಿಗೆ ಮನವಿ ಮಾಡುತ್ತೇನೆ. ರಾಜಕೀಯಕ್ಕೆ ಮಾತ್ರ ಬರಬೇಡಿ, ನಾನು ಮಾಡಿರೋದೆ ಸಾಕು.14 ವರ್ಷದಿಂದ ನನ್ನದೇ ಅದ ಕೆಲಸ ಮಾಡ್ಕೊಂಡು ಕೋಟ್ಯಂತರ ರೂಪಾಯಿ ಹಾಳು ಮಾಡಿಕೊಂಡಿದ್ದೇನೆ. ನನಗೆ ಮೂರು ಪಕ್ಷದಿಂದ ಘೋರ ಆನ್ಯಾಯ ಅಗಿದೆ. ಪ್ರತಿ ಮನೆ ಬಾಗಿಲಿಗೆ ಹೋಗ್ತೀನಿ, ಅವ್ರು ಏನು ನಿರ್ಧಾರ ಮಾಡ್ತಾರೋ ನೋಡೋಣ. ಚುನಾವಣೆಗೆ ನಿಲ್ಲು ಅಂದ್ರೆ ನಿಲ್ತೀನಿ, ಇಲ್ಲಾಂದ್ರೆ ಅಪ್ಪ ಮಾಡಿದ ತೋಟ ಇದೆ. ತೋಟ ಮಾಡ್ಕೊಂಡು ಜೀವನ ಮಾಡ್ತೇನೆ" ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..
ಈ ವೇಳೆ ಗೋಪಿಕೃಷ್ಣ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಕ್ರೋಶಗೊಂಡು ಮನೆಯ ಮುಂಭಾಗ ಟಯರ್ಗೆ ಬೆಂಕಿ ಹಾಕಿ ಪ್ರತಿಭಟನೆ ಮಾಡಲು ಮುಂದಾದರು. ಬಳಿಕ, ಮಧ್ಯ ಪ್ರವೇಶ ಮಾಡಿದ ಗೋಪಿ ಕೃಷ್ಣ, ಕಾರ್ಯಕರ್ತರಿಗೆ ಹಾಗೂ ಅವರ ಅಭಿಮಾನಿಗಳನ್ನು ಸಮಾಧಾನಪಡಿಸಿ, ಶಾಂತ ರೀತಿಯಿಂದ ಇರುವಂತೆ ಮನವಿ ಮಾಡಿದರು.