ಮೊದಲ ಬಾರಿಗೆ ಮತದಾನ ಮಾಡಿ ಹೆಮ್ಮೆಪಟ್ಟ ಯಂಗ್ ವೋಟರ್ಸ್: ಚುನಾವಣಾಧಿಕಾರಿಗಳಿಂದ ವಿಶೇಷ ಗಿಪ್ಟ್! - Young Voters
🎬 Watch Now: Feature Video
ಕಾರವಾರ: ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರಿಗೆ ಮತಗಟ್ಟೆಯಲ್ಲಿ ಗಿಡಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು. ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ನಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಮುಂಜಾನೆಯೇ ಆಗಮಿಸಿದ 5ಕ್ಕೂ ಹೆಚ್ಚು ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಬಳಿಕ ಮತದಾನ ಮಾಡಿದ ಯುವ ಮತದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು - ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು. ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಹಾಕುವ 50 ಯುವಕ- ಯುವತಿಯರಿಗೆ ಗಿಡಗಳನ್ನು ನೀಡಿ ಅಭಿನಂದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಮೊದಲ ಬಾರಿ ಮತದಾನ ಮಾಡಿ ಮಾತನಾಡಿದ ಪೂಜಾ ಭಂಡಾರಿ, ಮೊದಲ ಬಾರಿಗೆ ಮತದಾನ ಮಾಡುವುದರ ಬಗ್ಗೆ ಭಯಕ್ಕಿಂತ ಕುತೂಹಲ ಇತ್ತು. ತಂದೆ ಮತದಾನದ ಬಗ್ಗೆ ತಿಳಿಸಿದ್ದರು. ಸ್ನೇಹಿತರಿಗೂ ಕೂಡ ಈ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿದ್ದರಿಂದ ಎಲ್ಲರೂ ಸೇರಿ ಮಾತನಾಡಿದ್ದೆವು. ಅದರಂತೆ ಖುಷಿಯಿಂದಲೇ ಮತದಾನ ಮಾಡಿದ್ದೇನೆ. ಎಲ್ಲರೂ ಕೂಡ ಮತದಾನ ಮಾಡಬೇಕು. ನಾವು ಮತದಾನ ಮಾಡಿರುವುದಕ್ಕೆ ಹೂವಿನ ಗಿಡಗಳನ್ನು ಕೂಡ ನೀಡಿ ಅಭಿನಂದಿಸಿದ್ದಾರೆ ಇದರಿಂದ ತುಂಬಾ ಖುಷಿ ನೀಡಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಇನ್ನೋರ್ವ ಯುವ ಮತದಾರೆ ಎಲಿಜಾ ಗೋನ್ಸಾಲಿಸ್ ಮಾತನಾಡಿ, ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ತುಂಬಾ ಖುಷಿಯಾಗಿದೆ. ಇದರಿಂದ ಹೆಮ್ಮೆ ಕೂಡ ಇದೆ. ನಾವೆಲ್ಲರು ಭಾರತೀಯರಾಗಿ ಮತದಾನ ಮಾಡಬೇಕು ಎಂದು ಹೇಳಿದರು. ತ್ರೀಶಾ ತಿಮ್ಮಪ್ಪ ಹರಿಕಂತ್ರ ಮಾತನಾಡಿ, ಮೊದಲ ಬಾರಿಗೆ ಮತದಾನ ಮಾಡಿದ್ದರಿಂದ ತುಂಬಾ ಖುಷಿಯಾಗಿದೆ. ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಕೋರಿದ್ದಾರೆ.
ಇದನ್ನೂ ನೋಡಿ: ಮೊದಲ ಬಾರಿ ಮತದಾನ ಮಾಡಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದ ಉತ್ಸಾಹಿ ಯುವಕ - ಯುವತಿಯರು