ಬಂಡೀಪುರ ಕಾಡಿನಲ್ಲಿ ಬೆಂಕಿ: ಧಗಧಗಿಸುತ್ತಿದೆ ಎಕರೆಗಟ್ಟಲೇ ಭೂಮಿ - wild fire incidents
🎬 Watch Now: Feature Video
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಗೌರಿಕಲ್ಲು ಬೆಟ್ಟ ಎಂಬ ಪ್ರದೇಶದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು ಅಂದಾಜು 25-30 ಎಕರೆಯಷ್ಟು ಕಾಡು ಸುಟ್ಟು ಕರಕಲಾಗಿದೆ. ಕಾಡಿನಲ್ಲಿ ದಟ್ಟ ಹೊಗೆ ಆವರಿಸಿದ್ದು ಸಂಜೆ ಹೊತ್ತಿಗೆ ಬೆಂಕಿ ನಂದಿಸಲಾಗದಿದ್ದರೇ ಅರಣ್ಯದಲ್ಲಿ ಮತ್ತಷ್ಟು ಬೆಂಕಿ ವ್ಯಾಪಿಸುವ ಆತಂಕ ವ್ಯಕ್ತವಾಗಿದೆ.
ಅಂದಾಜು 70 ರಿಂದ 80 ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ದಿನೇ ದಿನೇ ಚಾಮರಾಜನಗರ ಜಿಲ್ಲೆಯಲ್ಲಿ ವಾತಾವರಣದಲ್ಲಿ ಬಿಸಿ ಏರುತ್ತಿದೆ. ಈ ನಡುವೆ ಕೆಲವು ಕಿಡಿಗೇಡಿಗಳ ಕೃತ್ಯದಿಂದ ಕಾಡು ಬೆಂಕಿಗೆ ಆಹುತಿಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಮಳೆ ಮತ್ತು ಕೊರೊನಾ ಕಾಲದಿಂದ ಕಾಡಿಗೆ ಬೆಂಕಿ ಬಿದ್ದಿರಲಿಲ್ಲ ಈಗ ಪರಿಸ್ಥಿತಿ ಬದಲಾಗಿದ್ದು, ಕಾಡಿಗೆ ಬೇಸಿಗೆ ಕಂಟಕ ಆರಂಭವಾಗಿದೆ.
ಗಡಿಜಿಲ್ಲೆಯಲ್ಲಿ ಹೊತ್ತಿ ಉರಿದ ಹುಲ್ಲಿನ ಮೆದೆಗಳು: ಅಗ್ನಿ ಅವಘಡ ಸಂಭವಿಸಿ ಹುಲ್ಲಿನ ಮೆದೆಗಳು ಸುಟ್ಟು ಕರಕಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ಬೇರೆ ಬೇರೆ ರೈತರು ಒಂದೇ ಜಾಗದಲ್ಲಿ 9 ಮೆದೆಗಳನ್ನು ಹಾಕಿದ್ದರು. ಒಂದು ಮೆದೆಗೆ ಹತ್ತಿದ ಬೆಂಕಿ ಎಲ್ಲದಕ್ಕೂ ವ್ಯಾಪಿಸಿ ಭಾರಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಮಂಡ್ಯ - ರಾಮನಗರದಲ್ಲಿ ಪ್ರತ್ಯೇಕ ಘಟನೆ: ಎರಡು ತೆಂಗಿನ ನಾರು ಕಾರ್ಖಾನೆಗಳು ಸುಟ್ಟು ಕರಕಲು