ಮಂಡ್ಯ: ಭತ್ತ ಖರೀದಿಗೆ ಜಿಲ್ಲಾಡಳಿತ ವಿಳಂಬ.. ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿರುವ ರೈತರು - ದಲ್ಲಾಳಿಗಳಿಗೆ ಭತ್ತ ಮಾರಟ
🎬 Watch Now: Feature Video
Published : Dec 21, 2023, 7:46 AM IST
ಮಂಡ್ಯ: ಜಿಲ್ಲೆಯಲ್ಲಿ ಈ ಬಾರಿ ಭತ್ತ ಖರೀದಿಗೆ ಸರ್ಕಾರ ನಿರಾಸಕ್ತಿ ತೋರಿಸಿರುವುದರಿಂದ ರೈತರು ತಮ್ಮ ಬೆಳೆಯನ್ನು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಭತ್ತ ರಾಗಿ ಖರೀದಿಗೆ ಜಿಲ್ಲಾಡಳಿತ ಕೇಂದ್ರಗಳನ್ನು ತೆರೆದಿದೆ. ಆದರೆ ನೋಂದಣಿ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿದ್ದು, ಭತ್ತ ಖರೀದಿಸುವಲ್ಲಿ ಜಿಲ್ಲಾಡಳಿತ ಹಿಂದೆ ಬಿದ್ದಿದೆ. ಪರಿಣಾಮ ರೈತರು ದಲ್ಲಾಳಿಗಳ ಮೊರೆ ಹೋಗಿದ್ದು, ಸರ್ಕಾರದ ನಿಗದಿತ ಬೆಲೆಗಿಂತ ಭತ್ತವನ್ನು ಹೆಚ್ಚಿನ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ದಲ್ಲಾಳಿ ಬಸವರಾಜು ಮಾತನಾಡಿ, ಈ ಸಾರಿ ಖರೀದಿ ಕೇಂದ್ರಕ್ಕಿಂತ ನಾವು ರೈತರಿಗೆ ಕನಿಷ್ಟ 800ರೂ. ಬೆಲೆ ಜಾಸ್ತಿ ನೀಡಿ ಭತ್ತ ಖರೀದಿ ಮಾಡುತ್ತಿರುವುದರಿಂದ ಖರೀದಿ ಕೇಂದ್ರಗಳಿಗೆ ಮುಖ ಮಾಡದೇ ಖಾಸಗಿ ವ್ಯಕ್ತಿಗಳಿಗೆ ರೈತರು ಭತ್ತ ಕೊಡುತ್ತಿದ್ದಾರೆ. ಹೀಗೆ ಕೊಡಲು ಕಾರಣವೇನೆಂದರೆ ಮುಂದಿನ ಬೆಳೆಗೆ ಸರ್ಕಾರ ನೀರು ಕೊಡುವುದಿಲ್ಲ ಎಂದು ಘೋಷಣೆ ಮಾಡಿರುವುದರಿಂದ ನಮಗೆ ಭತ್ತದ ಅನಿವಾರ್ಯತೆ ಹೆಚ್ಚಿದೆ. ಹೀಗಾಗಿ ನಾವು ಹೆಚ್ಚು ಹಣ ನೀಡಿ ಖರೀದಿ ಮಾಡುತ್ತಿದ್ದೇವೆ. ಸಣ್ಣ ಭತ್ತಕ್ಕೆ 3,000 ರೂ. ಹಾಗೇ ದಪ್ಪದ ಭತ್ತಕ್ಕೆ 2250 ರೂ ಕೊಟ್ಟು ನಾವು ಖರೀದಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟನೆ ನೀಡಿದ್ದಾರೆ. " ಕನಿಷ್ಠ ಬೆಂಬಲ ಯೋಜನೆಯಲ್ಲಿ ಭತ್ತ ಮತ್ತು ರಾಗಿಗೆ ಸಂಬಂಧ ಪಟ್ಟಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿದೆ. ಅದರ ಹಿನ್ನೆಲೆ ಈಗಾಗಲೇ 2 ಸಭೆಗಳನ್ನು ಕರೆದಿದ್ದೇವೆ. ಸಭೆಗಳಲ್ಲಿಯೂ ಕೂಡ ಕೆಲವು ಸಲಹೆ ಸೂಚನೆಗಳನ್ನು ಪಾಲಿಸುವ ದೃಷ್ಟಿಯಿಂದ ಮಾಹಿತಿಗಳನ್ನು ಕೊಡುತ್ತಿದ್ದೇವೆ. ಈಗ ಪರಿಷ್ಕೃತ ದರದಂತೆ ಈ ವರ್ಷದಲ್ಲಿ ರಾಗಿಗೆ ಕ್ವಿಂಟಾಲ್ಗೆ 3,846 ರೂ. ಹಾಗೇ ಭತ್ತ A ಗ್ರೇಡ್ಗೆ ಕ್ವಿಂಟಾಲ್ಗೆ 2,203 ರೂ. ಮತ್ತು ಸಾಮಾನ್ಯ ಭತ್ತಕ್ಕೆ- 2,183 ರೂ.ವಿನಂತೆ ದರ ನಿಗದಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಮೊದಲ ಬಾರಿಗೆ 33 ನೋಂದಣಿ ಕೇಂದ್ರ ತೆರೆಯಲಾಗಿದೆ.
ಈ ಬಾರಿ ಬಯೋ ಮೆಟ್ರಿಕ್ ಮೂಲಕ ನೋಂದಣಿಯಾಗುವುದರಿಂದ ತಾಂತ್ರಿಕವಾಗಿ ವಿಳಂಬವಾಗಿದೆ. 2-3 ದಿನದಲ್ಲಿ ಪ್ರಾರಂಭವಾಗಲಿದೆ. ಎಲ್ಲ ರೈತರು ಕಡ್ಡಾಯವಾಗಿ ಬಂದು ನೋಂದಣಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೋಂದಣಿಯಾದ ಬಳಿಕ ನಾವು ಖರೀದಿ ಮಾಡುತ್ತೇವೆ. ಹಾಗೇ ರೈತರು ವರ್ಷ ಪೂರ್ತಿ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದಾರೆ. ಇದನ್ನು ನಾವು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಹಾವೇರಿ: ರಾತ್ರೋರಾತ್ರಿ ಈರುಳ್ಳಿ ಬೆಳೆ ಕಳ್ಳತನ, ರೈತ ಕಂಗಾಲು