ದೊಡ್ಡಬಳ್ಳಾಪುರ: ರಸ್ತೆ ಬದಿ ವ್ಯಾಪಾರ ತೆರವುಗೊಳಿಸಿದ ನಗರಸಭೆ - Municipal Commissioner Parameshwar
🎬 Watch Now: Feature Video
Published : Aug 23, 2023, 3:50 PM IST
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾ.): ದೊಡ್ಡಬಳ್ಳಾಪುರ ನಗರಸಭೆಯು ಇಂದಿನಿಂದ ಸರ್ಕಾರಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕೆಲವರು ಮನೆ, ಅಂಗಡಿಗಳನ್ನು ಕಟ್ಟಿಕೊಂಡಿದ್ದು ರಸ್ತೆಗಳು ಕಿರಿದಾಗಿದ್ದವು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಮತ್ತು ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ರಸ್ತೆ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರು, ಮೊದಲ ಹಂತವಾಗಿ ರಸ್ತೆ ಬದಿಯ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಸರ್ಕಾರಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅಂಗಡಿ, ಶೆಡ್ಗಳನ್ನು ತೆರವು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಇದರಿಂದ ಎಚ್ಚೆತ್ತ ನಗರಸಭೆ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ. ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ತೆರವು ಕಾರ್ಯ ನಡೆಸಲಾಯಿತು. ಈ ವೇಳೆ ಬೀದಿಬದಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಯಿತು.
ತೆರವು ಕಾರ್ಯಾಚರಣೆ ಬಗ್ಗೆ ಮಾತನಾಡಿದ ಪೌರಾಯುಕ್ತ ಪರಮೇಶ್ವರ್, "ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಟಿ.ಬಿ.ಸರ್ಕಲ್), ಬಯಲು ಬಸವಣ್ಣ ದೇವಸ್ಥಾನದ ರಸ್ತೆ ಸೇರಿದಂತೆ ಪ್ರಮುಖ ರಸ್ತೆ ಬದಿಯಲ್ಲಿರುವ ಅಂಗಡಿ, ಶೆಡ್ಗಳನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ರಸ್ತೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿರುವವರ ತೆರವು ಕೂಡ ಮಾಡಲಾಗುವುದು" ಎಂದು ತಿಳಿಸಿದರು. ನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಪ್ರೀತಂ ಶ್ರೇಯಕರ, ಪರಿಸರ ವಿಭಾಗದ ಎಂಜಿನಿಯರ್ ಈರಣ್ಣ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಕೋಲಾರ: ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ