ಚಾಮರಾಜನಗರ: ದೇಗುಲದ ಬಳಿ ಮಲಗಿದ್ದ ಬಾಲಕರ ಮೇಲೆ ಆನೆ ದಾಳಿ - kannada news
🎬 Watch Now: Feature Video

ಚಾಮರಾಜನಗರ: ದೇವಾಲಯದ ಸಮೀಪ ಮಲಗಿದ್ದ ನಾಲ್ವರು ಬಾಲಕರ ಮೇಲೆ ಆನೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪದ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಣಿಕಂಠ (17) ಅರಸ (12) ಸ್ವಾಮಿ (11) ಹಾಗೂ ಅಭಿ (12) ಗಾಯಾಳು ಬಾಲಕರಾಗಿದ್ದು ಎಲ್ಲರನ್ನೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಜಡೇಸ್ವಾಮಿ ದೇವರ ಜಾತ್ರೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಚಪ್ಪರ ಹಾಕಿ ಗ್ರಾಮಸ್ಥರು ಜಾತ್ರೆಗೆ ಸಿದ್ದತೆ ನಡೆಸುತ್ತಿದ್ದರು. ದೇವಾಲಯದ ಕೆಲಸ ಮುಗಿಸಿ 20ಕ್ಕೂ ಹೆಚ್ಚು ಗ್ರಾಮಸ್ಥರು ಜೊತೆ ಬಾಲಕರು ಚಪ್ಪರದಲ್ಲಿ ಮಲಗಿದ್ದರು. ದಿಢೀರ್ ಆನೆಯೊಂದು ದಾಳಿ ಮಾಡಿದ್ದು ದೇಗುಲಕ್ಕೆ ಹಾಕಿದ್ದ ಚಪ್ಪರ ಧ್ವಂಸವಾಗಿದೆ. ಸ್ಥಳದಲ್ಲಿ ಮಲಗಿದ್ದ ನಾಲ್ವರು ಬಾಲಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ