ಡಿಕೆಶಿ ಪತ್ನಿ, ಮಕ್ಕಳು ಬಂದಿಳಿದ ಹೆಲಿಕಾಪ್ಟರ್ ತಪಾಸಣೆ: ಪರಿಶೀಲನೆ ತಪ್ಪಲ್ಲ ಎಂದ ಕೆಪಿಸಿಸಿ ಅಧ್ಯಕ್ಷ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ
🎬 Watch Now: Feature Video
ಮಂಗಳೂರು: ಧರ್ಮಸ್ಥಳಕ್ಕೆ ಹೆಲಿಕಾಪ್ಟರ್ನಲ್ಲಿ ಬಂದ ವೇಳೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದರಲ್ಲಿ ತಪ್ಪೇನಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಮಂಜುನಾಥ ದೇವರ ದರ್ಶನ ಪಡೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅವರ ಕೆಲಸ ಅವರು ಮಾಡಬೇಕು. ನಾವು ಏನಾದರೂ ದುರ್ಬಳಕೆ ಮಾಡುತ್ತೇವೆಯೋ ಎಂಬುದನ್ನು ಅವರು ಪರಿಶೀಲನೆ ಮಾಡುವುದು ತಪ್ಪಲ್ಲ ಎಂದು ಹೇಳಿದರು.
ನನಗೆ ಮಂಜುನಾಥನ ಬಗ್ಗೆ ಅಪಾರ ನಂಬಿಕೆ ವಿಶ್ವಾಸ ಇದೆ. ಮಂಜುನಾಥ ನನಗೆ ಮತ್ತು ರಾಜ್ಯಕ್ಕೆ ರಕ್ಷಣೆ ನೀಡುತ್ತಾನೆ. ರಾಜಕೀಯ ವಿಚಾರವನ್ನು ದೇವಸ್ಥಾನದಲ್ಲಿ ಮಾತನಾಡುವುದಿಲ್ಲ. ಧರ್ಮಸ್ಥಳದ ಮೂಲಕ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಪ್ರಚಾರ ನಡೆಸಲಿದ್ದೇನೆ ಎಂದರು.
ಇಂದು ಬೆಳಗ್ಗೆ ಧರ್ಮಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕುಟುಂಬ ಹೆಲಿಕಾಪ್ಟರ್ನಲ್ಲಿ ಬಂದ ವೇಳೆ, ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳು ಹಾಗೂ ಹೆಲಿಕಾಪ್ಟರ್ನಲ್ಲಿದ್ದ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಡಿಕೆ ಶಿವಕುಮಾರ್ ಅವರ ಪತ್ನಿ ಬಂದ ಹೆಲಿಕಾಪ್ಟರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿ ಮತ್ತು ಹೆಲಿಕಾಪ್ಟರ್ ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದಿದೆ. ಇದು ಖಾಸಗಿ ಹೆಲಿಕಾಪ್ಟರ್ ನಮ್ಮಲ್ಲಿ ಚೆಕ್ ಮಾಡಲು ಅವಕಾಶ ಇಲ್ಲ ಎಂದು ಹೆಲಿಕಾಪ್ಟರ್ ಪೈಲೆಟ್ ಚುನಾವಣಾ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಹೆಲಿಕಾಪ್ಟರ್ ಪೈಲಟ್ ರಾಮ್ ದಾಸ್ ಮತ್ತು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದೆ.
ಚುನಾವಣಾ ಅಧಿಕಾರಿಗಳು ಕೊನೆಗೂ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ. ಹೆಲಿಕಾಪ್ಟರ್ನಲ್ಲಿ ಧರ್ಮಸ್ಥಳಕ್ಕೆ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ, ಮಗ, ಮಗಳು ಆಳಿಯ ಬಂದಿದ್ದಾರೆ. ಡಿ ಕೆ ಶಿವಕುಮಾರ್ ಮತ್ತೊಂದು ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದಾರೆ.
ಇದನ್ನೂ ಓದಿ: ದೇವರ ಮೊರೆ ಹೋದ ಡಿ.ಕೆ.ಶಿವಕುಮಾರ್: ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ