LACಗೆ ಸೇನೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಮೋದಿ: ಸಚಿವ ಎಸ್.ಜೈಶಂಕರ್
🎬 Watch Now: Feature Video
ನವದೆಹಲಿ: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ವಿಷಯವಾಗಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ (ರಾಹುಲ್) ಈ ಬಗ್ಗೆ ಉನ್ನತ ಜ್ಞಾನ ಮತ್ತು ಬುದ್ಧಿವಂತಿಕೆ ಇದ್ದರೆ ನಾನು ಯಾವಾಗಲೂ ಅವರ ಮಾತು ಕೇಳಲು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವರಿಗೆ ವಿದೇಶಾಂಗ ನೀತಿ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಇನ್ನಷ್ಟು ತಿಳಿದುಕೊಳ್ಳಬೇಕೆಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, 1962ರಲ್ಲಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ಪ್ರಾಮಾಣಿಕತೆ ಪ್ರತಿಪಕ್ಷಕ್ಕೆ ಇರಬೇಕು. ಚೀನಾದ ಸೇನೆಯ ನಿಯೋಜನೆಗೆ ಪ್ರತಿಯಾಗಿ ಸೇನೆಯನ್ನು ಪೂರ್ವ ಲಡಾಖ್‌ನ ಎಲ್‌ಎಸಿಗೆ ಕಳುಹಿಸಿದ್ದು ರಾಹುಲ್ ಗಾಂಧಿಯಲ್ಲ, ಪ್ರಧಾನಿ ನರೇಂದ್ರ ಮೋದಿ ಎಂದರು.
ಆ ಪ್ರದೇಶವು ನಿಜವಾಗಿಯೂ ಯಾವಾಗ ಚೀನಾದ ನಿಯಂತ್ರಣಕ್ಕೆ ಒಳಪಟ್ಟಿತ್ತು?. 'ಸಿ'ಯಿಂದ ಪ್ರಾರಂಭವಾಗುವ ಪದಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು (ಕಾಂಗ್ರೆಸ್) ಕೆಲವು ಸಮಸ್ಯೆಗಳನ್ನು ಹೊಂದಿರಬೇಕು. ಉದ್ದೇಶಪೂರ್ವಕವಾಗಿಯೇ ಈಗಿನ ಪರಿಸ್ಥಿತಿಯನ್ನು ತಪ್ಪಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
1958ರಲ್ಲೇ ಚೀನಿಯರು ಮೊದಲು ಬಾರಿಗೆ ಆ ಪ್ರದೇಶಕ್ಕೆ ಬಂದರು. 1962ರ ಅಕ್ಟೋಬರ್‌ನಲ್ಲಿ ಅದನ್ನು ವಶಪಡಿಸಿಕೊಂಡರು. 1962ರಲ್ಲಿ ಚೀನೀಯರು ವಶಪಡಿಸಿಕೊಂಡ ಸೇತುವೆ ಬಗ್ಗೆ ಈಗ 2023ರಲ್ಲಿ ಮೋದಿ ಸರ್ಕಾರವನ್ನು ದೂಷಿಸಲು ಹೊರಟಿದ್ದೀರಿ. ಅದು ಎಲ್ಲಿದೆ, ಅದು ಹೇಗೆ ಸಂಭವಿಸಿತು ಎಂದು ಕೇಳುವ ನೈತಿಕತೆ ನಿಮಗಿಲ್ಲ ಎಂದು ಜೈಶಂಕರ್ ಟೀಕಿಸಿದರು.
ಇದೇ ವೇಳೆ 1988ರಲ್ಲಿ ರಾಜೀವ್ ಗಾಂಧಿ ಬೀಜಿಂಗ್‌ಗೆ ಹೋಗಿದ್ದರು. 1993 ಮತ್ತು 1996ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಆ ಒಪ್ಪಂದಗಳಿಗೆ ಸಹಿ ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಇದರಲ್ಲಿ ರಾಜಕೀಯ ಮಾತನಾಡಲಾರೆ. ಆದರೆ, ಈ ಸಮಯದಲ್ಲಿ ನಮಗೆ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯವಿತ್ತು. ಹೀಗಾಗಿ ಆ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ವಂಚನೆ ಪ್ರಕರಣ: ಸಂಧ್ಯಾ ಕನ್ವೆನ್ಷನ್ ಎಂಡಿ ಶ್ರೀಧರ್ ರಾವ್ ದೆಹಲಿ ಪೊಲೀಸ್ ಕಸ್ಟಡಿಗೆ