ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ: ಆನಂದ ನ್ಯಾಮಗೌಡ - Ananda Nyam Gowda
🎬 Watch Now: Feature Video
ಬಾಗಲಕೋಟೆ: ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯಿಂದಾಗಿ ಈ ಬಾರಿ ಕಾಂಗ್ರೆಸ್ ಜಯ ಗಳಿಸುವುದು ಖಚಿತ ಎಂದು ಜಮಖಂಡಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ವಿಶ್ವಾಸ ವ್ಯಕ್ತಪಡಿಸಿದರು. ಜಮಖಂಡಿ ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು.
ಬಳಿಕ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು "ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಇದರ ಜತೆಗೆ ಕಾಂಗ್ರೆಸ್ ಪಕ್ಷದಿಂದ 5 ಗ್ಯಾರಂಟಿ ಯೋಜನೆ ಕಾರ್ಡ್ ಘೋಷಿಸಲಾಗಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅಲ್ಲದೇ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ. ಈ ಹಿನ್ನೆಲೆ ನಾವು ಅಧಿಕ ಮತಗಳಿಂದ ಜಯಗಳಿಸುವುದು ಖಚಿತ" ಎಂದರು.
ನಮ್ಮ ತಂದೆ ದಿ.ಸಿದ್ದು ನ್ಯಾಮಗೌಡ ಅವರು ರಾಜಕೀಯದಲ್ಲಿ ಸಾಕಷ್ಟು ಕೆಲಸ ಕಾರ್ಯ ಮಾಡಿದ್ದಾರೆ. ಅವರು ಶಾಸಕರಾದ ಸಮಯದಲ್ಲಿ ಅಭಿವೃದ್ಧಿ ಸೇರಿದಂತೆ ಜನಮನ್ನಣೆ ಗಳಿಸಿದ್ದರು. ಅವರು ರಾಜಕೀಯದಲ್ಲಿದ್ದಾಗ ತೆರೆಯ ಹಿಂದೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ನಾನೇ ರಾಜಕೀಯವಾಗಿ ಎಲ್ಲಾ ಕೆಲಸ ಕಾರ್ಯ ಮಾಡುತ್ತಿದ್ದೇನೆ. ತಂದೆಯವರ ಕನಸಿನ ಕೂಸಿನ ಶ್ರಮ ಬಿಂದು ಸಾಗರದಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ಲಾಭವಾಗಲಿದೆ. ಬಿಜೆಪಿ ಪಕ್ಷದಿಂದ ಯಾರೇ ನಿಂತರು ಯಾವುದೇ ಪರಿಣಾಮ ಬೀರಲ್ಲ. ಕ್ಷೇತ್ರದ ಅಭಿವೃದ್ಧಿಯೇ ನಮಗೆ ಶ್ರೀರಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 5 ಸಾವಿರ ಜನರಿಂದ ನನ್ನ ಆಸ್ತಿ ಪತ್ರ ಡೌನ್ಲೋಡ್: ಡಿಕೆಶಿ