ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಗಳ, ಇಬ್ಬರಿಗೆ ಗಾಯ: ವಿಡಿಯೋ ವೈರಲ್
🎬 Watch Now: Feature Video
ಗುರುಮಠಕಲ್: ತಾಲೂಕಿನ ಯದ್ಲಾಪುರ ಗ್ರಾಮದ ಹೊರವಲಯದ ಮೌಲಾಲಿ ಬೆಟ್ಟದ ಆವರಣದಲ್ಲಿ ಸೋಮವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಗಳವಾಗಿದೆ. ಸೋಮವಾರ ಬೆಟ್ಟದ ಮೇಲಿನ ಮೌಲಾಲಿ ದರ್ಗಾಕ್ಕೆ ಯದ್ಲಾಪುರ ಗ್ರಾಮಸ್ಥರೊಬ್ಬರು ದೇವರನ್ನು ಮಾಡಿದ್ದರು (ಹರಕೆ ತೀರಿಸುವುದು). ಕಾರ್ಯಕ್ರಮಕ್ಕೆ ಮಾಜಿ ಎಂಎಲ್ಸಿ ಬಾಬುರಾವ್ ಚಿಂಚನಸೂರ ಆಗಮಿಸಿ ಹಿಂದಿರುಗಿದ್ದರು.
ಚಿಂಚನಸೂರ ಅವರು ಬಂದಾಗ ಕೆಲವರು ತಮ್ಮ ಸಮಸ್ಯೆಗಳ ಕುರಿತು ಬೇಸರ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಚಿಂಚನಸೂರ ಹಿಂದಿರುಗಿದ ಮೇಲೆ ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಮೂಲಕ ಹೊಡೆದಾಡಿದ್ದಾರೆ. ನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸ್ಥಳಕ್ಕೆ ಪಿಐ ಅಂಬಾರಾಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಕುರಿತು ಸದ್ಯ ವಾಟ್ಸ್ಆ್ಯಪ್ನಲ್ಲಿ ವೀಡಿಯೋ ಹರಿದಾಡುತ್ತಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ತಡವಾಗಿ ಗುರುಮಠಕಲ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಸುರೇಶ ರಾಠೋಡ, ಸಾಬಣ್ಣ ಸೇರಿ ಮೂರು ಜನ ಕಾಂಗ್ರೆಸ್ ಮೂರು ಜನ ಜೆಡಿಎಸ್ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ.
ಇದನ್ನೂ ನೋಡಿ: ಶಾಲಾ ಆವರಣದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ - ವಿಡಿಯೋ