ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಯಾವುದೇ ಕಿತ್ತಾಟ ಇಲ್ಲ: ಸಚಿವ ಗೋವಿಂದ ಕಾರಜೋಳ
🎬 Watch Now: Feature Video
ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಯಾವುದೇ ಕಿತ್ತಾಟ ಇಲ್ಲ, ಹೈಕಮಾಂಡ್ ಯಾರಿಗೆ ಸೂಚನೆ ನೀಡುತ್ತದೆಯೋ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತ ಪ್ರತಿನಿಧಿ ನಡೆಸಿದ ಕಿರು ಸಂದರ್ಶನದಲ್ಲಿ ಮುಂದಿನ ಮುಖ್ಯಮಂತ್ರಿ ಸಾಲಿನಲ್ಲಿ ನಿಮ್ಮ ಹೆಸರು ಕೇಳಿ ಬರುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಮ್ಮಲ್ಲಿ ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ನಾವು ಕುರ್ಚಿಗಾಗಿ ಕಿತ್ತಾಟ ಮಾಡುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಜರಂಗದಳ ನಿಷೇದ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಕನಿಷ್ಠ ಜ್ಞಾನ ಇಲ್ಲ. ಹನುಮಂತನ ಭಕ್ತರೆ ಭಜರಂಗಿಗಳು, ನಾನು ಕೂಡ ಭಜರಂಗಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆ ಸಮಯದಲ್ಲಿ ಮಾತ್ರ ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನಲ್ಲಿ ಹೆಲಿಕಾಪ್ಟರ್ ನಿರ್ಮಾಣ ಕೇಂದ್ರ, ವಿಮಾನ ನಿಲ್ದಾಣ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದರು. ರಾಜ್ಯಕ್ಕೆ ಸಾಕಷ್ಟು ಅನುದಾನವನ್ನು ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಪಕ್ಷದವರಿಗೆ ಅರ್ಥವಾಗಲ್ಲ ಎಂದು ಸಚಿವ ಕಾರಜೋಳ ಹೇಳಿದರು.
ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತನ ನಿವಾಸದ ಮೇಲೆ ಐಟಿ ದಾಳಿ