ರಾಸಾಯನಿಕ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ; ತಕ್ಷಣದ ತೆರವು ಕಾರ್ಯಾಚರಣೆಯಿಂದ ತಪ್ಪಿದ ಅವಘಡ - lorry lost control of the driver and overturned
🎬 Watch Now: Feature Video
ಉಳ್ಳಾಲ (ದಕ್ಷಿಣಕನ್ನಡ) : ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೈಂಟ್ ತಯಾರಿಕಾ ಇಂಡಸ್ಟ್ರಿಗೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದು ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಚಾಲಕ ಮಯೂರ್ (40)ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿ ಮಧ್ಯೆಯೇ ಪಲ್ಟಿಯಾಗಿ ಬಿದ್ದಿದ್ದ ಲಾರಿ ಹಾಗೂ ಗ್ಯಾಸ್ ಹೊಂದಿದ್ದ ಟ್ಯಾಂಕರ್ನ ತೆರವು ಕಾರ್ಯಾಚರಣೆ ತಡರಾತ್ರಿ 1 ಗಂಟೆಯವರೆಗೆ ನಡೆಯಿತು. ಅಗ್ನಿ ಶಾಮಕ ದಳ, ಎಸಿಪಿ ಧನ್ಯಾ ಎನ್. ನಾಯಕ್, ದಕ್ಷಿಣ ಸಂಚಾರಿ ಠಾಣೆಯ ರಮೇಶ್ ಹಾನಾಪುರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಯಸ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ನಡು ರಸ್ತೆಯಲ್ಲೇ ಉರುಳಿದ್ದ ರಾಸಾಯನಿಕ ಟ್ಯಾಂಕರ್ನಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿ ಪರಿಸರವಿಡೀ ದುರ್ವಾಸನೆ ಬೀರುತಿತ್ತು.
ಬಳಿಕ ತತ್ಕ್ಷಣವೇ ಸ್ಥಳಕ್ಕಾಗಮಿಸಿದ ಬೈಕಂಪಾಡಿ ಬಿಎಎಸ್ಎಫ್ ಸುರಕ್ಷಾ ತಂಡ ಸಮೀಪದ ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಆರಿಸಲು ಸೂಚನೆ ನೀಡಿತು. ರಾ.ಹೆ.66 ರ ಎರಡೂ ಕಡೆಗಳಲ್ಲಿ ವಾಹನಗಳು ಸಂಚರಿಸದಂತೆ ಸಂಚಾರಿ ಠಾಣಾ ಪೊಲೀಸರು ತಡೆಹಿಡಿದಿದ್ದರು. ಬಿಎಎಸ್ಎಫ್ ನಿಂದ ಬಂದ ಬೃಹತ್ ಗಾತ್ರದ ಕ್ರೇನ್ ಸಹಿತ ಎರಡು ಸಣ್ಣ ಕ್ರೇನ್ ಗಳನ್ನು ಬಳಸಿಕೊಂಡು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಮೊದಲಿಗೆ ಲಾರಿಯನ್ನು ಮೇಲಕ್ಕೆತ್ತಲಾಯಿತು. ಆನಂತರ ಟ್ಯಾಂಕರನ್ನು ಸುರಕ್ಷಿತವಾಗಿ ಎತ್ತಿ, ಇನ್ನೊಂದು ಲಾರಿಗೆ ಲೋಡ್ ಮಾಡಿ ತಕ್ಷಣ ಕಳುಹಿಸಲಾಯಿತು.
ರಾಸಾಯನಿಕ ಹೊಂದಿರುವ ಟ್ಯಾಂಕ್ ಹಲವು ಪದರಗಳು ಹಾಗೂ ಸುತ್ತಲೂ ಕಬ್ಬಿಣದ ಸುರಕ್ಷಾ ಕವಚ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದೆ. ಇದು ಸಾಬೂನಿಗೆ ಹಾಕುವ ರಾಸಾಯನಿಕ ಆಗಿರುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂದು ಬಿಎಎಸ್ಎಫ್ ಸೇಫ್ಟಿ ಆಫೀಸರ್ ತಿಳಿಸಿದರು. ಯಶಸ್ವಿ ತೆರವು ಕಾರ್ಯಾಚರಣೆ ನಂತರ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು. ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಬೆಂಗಳೂರಿನಲ್ಲಿದ್ದರೂ ಸಹ ತಮ್ಮ ಆಪ್ತ ಸಹಾಯಕ ಪ್ರವೀಣ್ ಅವರನ್ನು ಸ್ಥಳಕ್ಕೆ ಕಳುಹಿಸಿ ತೆರವು ಕಾರ್ಯಾಚರಣೆ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡರು.
ಇದನ್ನೂ ಓದಿ :ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಜನಜಾಗೃತಿ ಮರಳು ಕಲೆ