ಕಾವೇರಿ ವಿಚಾರದಲ್ಲಿ ಕುರುಡಾದ ರಾಜ್ಯ ಸರ್ಕಾರ: ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕನ್ನಡಪರ ಸಂಘಟನೆ ಆಕ್ರೋಶ - ಚಾಮರಾಜನಗರದಲ್ಲಿ ಕಾವೇರಿ ಪ್ರತಿಭಟನೆ
🎬 Watch Now: Feature Video
Published : Sep 5, 2023, 4:00 PM IST
ಚಾಮರಾಜನಗರ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲೆಯ ಶ್ರೀ ಚಾಮರಾಜೇಶ್ವರ ದೇವಾಲಯ ಮುಂಭಾಗದಿಂದ ಪ್ರತಿಭಟನಾನಿರತರು ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ತಮಿಳುನಾಡು, ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರದ ಕಣ್ಣು ಕುರುಡಾಗಿದೆ ಎಂದು ಕಿಡಿಕಾರಿದರು.
ಕಳೆದ 7 ದಿನಗಳಿಂದ ವಿಭಿನ್ನ ರೀತಿಯಲ್ಲಿ ನಿರಂತರವಾದ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಕರ್ನಾಟಕ ಸರ್ಕಾರ ನೀರು ಬಿಟ್ಟಿರುವುದನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆಯೇ ಹೊರತು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿಲ್ಲ. ಕಾವೇರಿ ನಿರ್ವಹಣಾ ಮಂಡಳಿಗೆ ಮನವಿ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿ ಎಂದರು.
ಡಿಸಿಎಂ ಹೇಳಿಕೆಗೆ ಖಂಡನೆ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೇಕೆದಾಟು ಯೋಜನೆಗಾಗಿ ನಾವು ಹೋರಾಟ ಮಾಡುವಾಗ ಕನ್ನಡಪರ ಹೋರಾಟಗಾರರು, ರೈತರು ಎಲ್ಲಿದ್ದೀರಿ ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ನೀವು ಮೇಕೆದಾಟು ವಿಚಾರವಾಗಿ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದೀರಿ. ಆದರೆ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿವೆ.
ಬರೀ ಮೇಕೆದಾಟು ಒಂದೇ ಅಲ್ಲ ಕಾವೇರಿ ವಿಚಾರವಾಗಿ, ಕಳಸ ಬಂಡೂರಿ ವಿಚಾರವಾಗಿ, ಹೊಗನೇಕಲ್ ವಿಚಾರವಾಗಿ ಧ್ವನಿ ಎತ್ತಿರುವುದು ನಮ್ಮ ಸಂಘಟನೆಗಳು ಮಾತ್ರ. ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದು ತಮಗೆ ಶೋಭೆ ತರುವ ವಿಚಾರವಲ್ಲ. ಮುಂದಿನ ದಿನಗಳಲ್ಲಿ ಹೋರಾಟಗಾರರು, ರೈತರ ವಿರುದ್ದ ಇಂತಹ ಹೇಳಿಕೆ ನೀಡಬಾರದು ಎಂದು ಡಿಕೆಶಿ ಅವರಿಗೆ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಮುಂದುವರಿದ ಕನ್ನಡ ಪರ, ರೈತ ಸಂಘಟನೆಗಳ ಪ್ರತಿಭಟನೆ