ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿಯಿಂದ ಚಕ್ಕಡಿ ಏರಿ ಪ್ರತಿಭಟನೆ - BJP protests against Congress government
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/08-09-2023/640-480-19463332-thumbnail-16x9-bharat.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 8, 2023, 7:26 PM IST
ಬೆಳಗಾವಿ: ರೈತರ ಆತ್ಮಹತ್ಯೆ, ಬರಗಾಲ ಸಮಸ್ಯೆ, ವಿದ್ಯುತ್ ಅಭಾವ, ಲೋಡ್ ಶೆಡ್ಡಿಂಗ್, ರೈತರ ವಿವಿಧ ಯೋಜನೆಗಳನ್ನು ರದ್ದುಪಡಿಸಿರುವ ವಿಚಾರಗಳನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಕ್ಕಡಿ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲಾಶಯಗಳಿಗೆ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ರೈತರು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಅಸರ್ಮಪಕ ವಿದ್ಯುತ್ ಪೂರೈಕೆ ಮತ್ತು ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಹೇರುವ ಮೂಲಕ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಲು ವಿಫಲವಾಗಿದೆ. ಬರಗಾಲಕ್ಕೆ ತುತ್ತಾಗಿರೋ ರೈತರು ಶೇ. 80ರಷ್ಟು ಬಿತ್ತನೆ ಮಾಡಿದ್ದಾರೆ. ಬೆಳೆಗಳನ್ನು ರಕ್ಷಿಕೊಳ್ಳಲು ವಿದ್ಯುತ್ ಅವಶ್ಯಕತೆ ಇದೆ. ಹೀಗಾಗಿ ಲೋಡ್ ಶೆಡ್ಡಿಂಗ್ ತಪ್ಪಿಸಿಸಿ, ಹಗಲು ಹೊತ್ತಿನಲ್ಲೇ ರೈತರಿಗೆ 7 ಗಂಟೆ ವಿದ್ಯುತ್ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ. ಜೀರಲಿ ಮತ್ತು ಮಾಜಿ ಶಾಸಕ ಅನಿಲ ಬೆನಕೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ರೈತರನ್ನು ಸಿದ್ದರಾಮಯ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್, ರೈತರ ವಿದ್ಯಾ ನಿಧಿ, ಭೂ ಸಿರಿ, ಜಿಲ್ಲೆಗೊಂದು ಗೋ ಶಾಲೆ ಸೇರಿದಂತೆ 18 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ. ಇದರಿಂದ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ. ತಕ್ಷಣವೇ ಈ ಎಲ್ಲ ಯೋಜನೆಗಳು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಜನಪ್ರಿಯತೆ ಇದೆ ಎಂಬ ಕಾರಣಕ್ಕೆ ಜೆಡಿಎಸ್-ಬಿಜೆಪಿಗೆ ಆತಂಕ: ಸಚಿವ ಕೃಷ್ಣ ಬೈರೇಗೌಡ