ಹುಡುಗಿಯರನ್ನು ಚೇಡಿಸಿದ್ದಕ್ಕೆ ದೂರು ಕೊಟ್ಟ ಮನೆ ಮಾಲೀಕ.. ಬೈಕ್ ಮೇಲೆ ಬಂದ ಲಾಂಗ್ ಬೀಸಿದ ಯುವಕ VIDEO - ಲಾಂಗ್ ಬೀಸಿದ ಯುವಕ
🎬 Watch Now: Feature Video


Published : Oct 26, 2023, 9:26 AM IST
ಆನೇಕಲ್: ಬೈಕ್ನಲ್ಲಿ ಬಂದ ಯುವಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಲಾಂಗ್ ಬೀಸಿ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಆತಂಕಕಾರಿ ಘಟನೆ ಆನೇಕಲ್ನ ವಿನಾಯಕನಗರದ ಎರಡನೇ ಬೀದಿಯಲ್ಲಿ ನಡೆದಿದೆ. ದಾಳಿಯಿಂದ ರಾಮಚಂದ್ರ ಕೈಗೆ ಗಾಯವಾಗಿದೆ.
ರಾಮಚಂದ್ರ ಪತ್ನಿ ಮತ್ತು ಒಂದೂವರೆ ವರ್ಷದ ಮಗು ಜೊತೆ ತಮ್ಮ ಮನೆ ಮುಂದೆ ಅಡ್ಡಾಡುತ್ತಿದ್ದರು. ಈ ವೇಳೆ, ಬೈಕ್ನಲ್ಲಿ ಮೂವರು ಯುವಕರು ಬಂದಿದ್ದಾರೆ. ಬಳಿಕ ಓರ್ವ ಯುವಕ ಏಕಾಏಕಿ ರಾಮಚಂದ್ರನ ಮೇಲೆ ಲಾಂಗ್ ಬೀಸಿದ್ದಾನೆ. ಪರಿಣಾಮ ಲಾಂಗ್ ರಾಮಚಂದ್ರನ ಕೈಗೆ ತಗುಲಿದೆ. ಇದರಿಂದ ಹೆದರಿ ರಾಮಚಂದ್ರ ಹೆಂಡತಿ ಮಗು ಜೊತೆ ಮನೆ ಒಳಗಡೆ ಓಡಿ ಹೋಗಿದ್ದಾರೆ. ಆದರೂ ಬಿಡದ ಯುವಕ, ಮನೆ ಮುಂದಿನ ಬೈಕ್ ಮತ್ತು ಅಂಗಡಿ ಕಿಟಕಿ ಬಾಗಿಲಿಗೆ ಲಾಂಗ್ನಿಂದ ಹೊಡೆದು ಜಖಂಗೊಳಿಸಿ ಹೋಗಿದ್ದಾನೆ.
ಚುಡಾಯಿಸಿದ್ದರ ಬಗ್ಗೆ ದೂರು ಕೊಟ್ಟಿದ್ದಕ್ಕೆ ಸಿಟ್ಟು? ರಾಮಚಂದ್ರ ಮನೆಯ ಮೇಲೆ ಬಾಡಿಗೆಗಿದ್ದ ಶಿಕ್ಷಕ ಎಸ್ಎಸ್ಎಲ್ಸಿ - ಪಿಯುಸಿ ಟ್ಯೂಷನ್ ನಡೆಸುತ್ತಿದ್ದರು. ಟ್ಯೂಷನ್ಗೆ ಬರುತ್ತಿದ್ದ ಹುಡುಗಿಯರನ್ನ ಸಿದ್ದಾರ್ಥ ತನ್ನ ಗೆಳೆಯರೊಂದಿಗೆ ಚೇಡಿಸುತ್ತಿದ್ದನಂತೆ. ಇದನ್ನ ಗಮನಿಸಿದ ಮನೆ ಮಾಲೀಕ ರಾಮಚಂದ್ರ ಆರು ತಿಂಗಳ ಹಿಂದೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಕೋಪಗೊಂಡ ಸಿದ್ಧಾರ್ಥ, ಮನೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಾನೆ. ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.