ಚಂದ್ರಬಾಬು ನಾಯ್ಡು ಬಂಧನಕ್ಕೆ ಖಂಡನೆ: ನಟ ಪವನ್ ಕಲ್ಯಾಣ್ ಪೊಲೀಸ್​ ವಶಕ್ಕೆ

🎬 Watch Now: Feature Video

thumbnail

By ETV Bharat Karnataka Team

Published : Sep 10, 2023, 7:26 AM IST

ಅಮರಾವತಿ (ಆಂಧ್ರಪ್ರದೇಶ): ಜನಸೇನಾ ಪಕ್ಷದ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಮತ್ತು ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಅವರನ್ನು ಆಂಧ್ರಪ್ರದೇಶ ಪೊಲೀಸರು ಇಂದು ಮುಂಜಾನೆ ಎನ್‌ಟಿಆರ್ ಜಿಲ್ಲೆಯಲ್ಲಿ ವಶಕ್ಕೆ ಪಡೆದರು. ಇದೀಗ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪವನ್​ ಕಲ್ಯಾಣ್ ಅವರು ಶನಿವಾರ ನಂದ್ಯಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಬಂಧನವನ್ನು ತೀವ್ರವಾಗಿ ಖಂಡಿಸಿದ್ದರು. ನಾಯ್ಡು ಬೆಂಬಲಿಸಲು ಅವರು ವಿಜಯವಾಡ ಕಡೆಗೆ ವಿಶೇಷ ವಿಮಾನದಲ್ಲಿ ತೆರಳಲು ಪ್ರಯತ್ನಿಸಿದ್ದರು. ಆದರೆ, ವಿಜಯವಾಡಕ್ಕೆ ವಿಶೇಷ ವಿಮಾನ ಹೈದರಾಬಾದ್‌ನಿಂದ ಟೇಕ್ ಆಫ್ ಆಗದಂತೆ ಪೊಲೀಸರು ನೋಡಿಕೊಂಡಿದ್ದಾರೆ. ಶನಿವಾರ (ನಿನ್ನೆ) ಎರಡು ಬಾರಿ ಎನ್‌ಟಿಆರ್ ಜಿಲ್ಲೆಯಲ್ಲಿ ಅವರ ಬೆಂಗಾವಲು ವಾಹನವನ್ನು ತಡೆಹಿಡಿಯಲಾಯಿತು. ಆದರೂ ಪವನ್​ ಕಲ್ಯಾಣ್ ಅವರು ವಾಹನದಿಂದ ಇಳಿದು ವಿಜಯವಾಡದ ಮಂಗಳಗಿರಿ ಕಡೆಗೆ ಹೋಗಲು ಅನುವು ಮಾಡಿಕೊಡುವಂತೆ ಆಗ್ರಹಿಸಿದರು. ಇದನ್ನು ತಡೆದ ಪೊಲೀಸರು ಬಳಿಕ ಅವರನ್ನು ವಶಕ್ಕೆ ಪಡೆದಿದ್ದಾರೆ.

"ನಾವು ಪವನ್​ ಕಲ್ಯಾಣ್ ಮತ್ತು ಮನೋಹರ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಸದ್ಯ ಅವರನ್ನು ವಿಜಯವಾಡಕ್ಕೆ ಕರೆದೊಯ್ಯುತ್ತಿದ್ದೇವೆ" ಎಂದು ನಂದಿಗಾಮ ಉಪವಿಭಾಗದ ಪೊಲೀಸ್ ಅಧಿಕಾರಿ ಜನಾರ್ದನ್ ನಾಯ್ಡು ಮಾಹಿತಿ ನೀಡಿದರು.  

ಘಟನೆಯ ಹಿನ್ನೆಲೆ: ಕೌಶಲ್ಯಾಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ಮುಂಜಾನೆ ಬಂಧಿಸಿದೆ. ಬಂಧನದ ನಂತರ ರಸ್ತೆ ಮಾರ್ಗವಾಗಿ ವಿಜಯವಾಡಕ್ಕೆ ಕರೆದೊಯ್ಯಲಾಗಿದ್ದು, ಸಿಐಡಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಸ್ಕಿಲ್​ ಡೆವಲಪ್​ಮೆಂಟ್​ ಹಗರಣ.. ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.