ಬೆಳಗಾವಿಯಲ್ಲಿ ಅಮಿತ್ ಶಾ ರೋಡ್ ಶೋ: ವಿಡಿಯೋ - ಕುಂದಾ ನಗರಿಯಲ್ಲಿ ಅಮಿತ್ ಶಾ
🎬 Watch Now: Feature Video
ಬೆಳಗಾವಿ: ಇಲ್ಲಿನ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರ ಮತ ಪ್ರಚಾರಕ್ಕಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಂಜೆ ನಗರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭಗೊಂಡ ರೋಡ್ ಶೋ ಕಿರ್ಲೋಸ್ಕರ್ ರಸ್ತೆ, ಮಾರುತಿ ಗಲ್ಲಿ ಮಾರ್ಗವಾಗಿ ಸಂಚರಿಸಿತು. ಬಿಜೆಪಿ ಚಾಣಕ್ಯನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ರವಿ ಪಾಟೀಲ ಬೆಂಬಲಿಗರು ಬಿಜೆಪಿ ಪರ ಘೋಷಣೆ ಕೂಗಿ, ನಾಯಕರ ಮೇಲೆ ಪುಷ್ಪವೃಷ್ಠಿಗೈದರು.
ಜನರತ್ತ ಕೈ ಬೀಸಿದ ಅಮಿತ್ ಶಾ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರು. ಕ್ಷೇತ್ರದ ಮತದಾರರು ತಾವೊಬ್ಬರೇ ಬಿಜೆಪಿ ಬೆಂಬಲಿಸಿದರೆ ಸಾಲದು, ಪ್ರತಿಯೊಬ್ಬರೂ ತಮ್ಮ ಸಂಬಂಧಿಗಳು, ಸ್ನೇಹಿತರು ಸೇರಿ ಕನಿಷ್ಠ 15 ಜನರಿಗೆ ಫೋನ್ ಮಾಡಿ ಬಿಜೆಪಿಗೆ ಮತ ಹಾಕುವಂತೆ ಹೇಳಬೇಕು. ಕಮಲ ಅರಳಿಸಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರದ ರಚನೆಗೆ ಸಹಕರಿಸಿ ಮನವಿ ಮಾಡಿದರು.
ರಸ್ತೆಯಲ್ಲಿ ಬಿಜೆಪಿ ಬಾವುಟಗಳು ರಾರಾಜಿಸಿದರೆ, ಮತ್ತೊಂದೆಡೆ ಕೇಸರಿ ಪೇಟ ತೊಟ್ಟು ಮಹಿಳೆಯರು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಅಭ್ಯರ್ಥಿ ಡಾ.ರವಿ ಪಾಟೀಲ ಸೇರಿ ಇತರ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ: ಬಜರಂಗದಳಕ್ಕೆ ಅವಮಾನಿಸುವ ಪಕ್ಷಕ್ಕೆ ಸೇರಿರುವ ಸವದಿಯನ್ನು ಸೋಲಿಸಿ: ಅಮಿತ್ ಶಾ ಕರೆ