ಬಾಗಿಲು ಮುರಿದು ಶಾಲೆಯೊಳಗೆ ನುಗ್ಗಿದ ಕರಡಿ: ಸಿಸಿಟಿವಿ ವಿಡಿಯೋ - ಸಿಸಿಟಿವಿ ಕ್ಯಾಮೆರಾ
🎬 Watch Now: Feature Video
Published : Dec 15, 2023, 11:03 PM IST
ಚಾಮರಾಜನಗರ: ಹನೂರು ತಾಲೂಕಿನಲ್ಲಿ ಕರಡಿ ಉಪಟಳ ಜೋರಾಗಿದೆ. ಅಜ್ಜಿಪುರದಲ್ಲಿ ಕರಡಿ ಸೆರೆಹಿಡಿದ ಬಳಿಕ ಈಗ ಸಂದನಪಾಳ್ಯದ ಶಾಲೆಯೊಂದಕ್ಕೆ ಕರಡಿ ನುಗ್ಗಿ ದಾಂಧಲೆ ಮಾಡಿರುವ ಘಟನೆ ನಡೆದಿದೆ. ಹನೂರು ತಾಲೂಕಿನ ಸಂದನಪಾಳ್ಯ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿ ನುಗ್ಗಿದ್ದು ಆಹಾರ ಪದಾರ್ಥಗಳನ್ನು ತಿನ್ನುವುದರ ಜತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿದೆ.
ರಾತ್ರಿ 1 ಗಂಟೆ ಸುಮಾರಿಗೆ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿರುವ ಕರಡಿ, ಬೀರು ಬಾಗಿಲನ್ನು ಮುರಿದಿದ್ದು, ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ತಿಂದು ಹಾಕಿದೆ. ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಳಿಗ್ಗೆ ಮುಖ್ಯ ಶಿಕ್ಷಕ ಲೂಯಿಸ್ ನೇಸನ್ ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿ ಬಾಗಿಲು ಮುರಿದಿರುವುದು ಕಂಡುಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಪುಸ್ತಕ, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಸಿಸಿ ಕ್ಯಾಮೆರಾ ನೋಡಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಗ್ರಾಮಕ್ಕೆ ನುಗ್ಗಿ ಮೊಟ್ಟೆ-ಹಣ್ಣು ತಿಂದು ದಾಂಧಲೆ ಮಾಡಿ ಪರಾರಿಯಾಗಿದ್ದ ಕರಡಿ ಸೆರೆ