‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ತಡೆಯೊಡ್ಡಿ ಕೋಯಿಕ್ಕೋಡ್ನಲ್ಲಿ ಪ್ರತಿಭಟನೆ: ವಿಡಿಯೋ..
🎬 Watch Now: Feature Video
ಕೋಯಿಕ್ಕೋಡ್ (ಕೇರಳ): ಟ್ರೇಲರ್ನಿಂದಲೇ ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಇಂದು ಬಿಡುಗಡೆಯಾಗಿದೆ. ಕೇರಳದ 20 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಈ ವೇಳೆ ಸಿನಿಮಾ ಬಿಡುಗಡೆಗೆ ತಡೆಯೊಡ್ಡಿ ವಿವಿದೆಡೆ ಭಾರೀ ಪ್ರತಿಭಟನೆಗಳು ನಡೆದವು. ಈ ಹಿನ್ನೆಲೆಯಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಕೊನೆಯ ಕ್ಷಣದಲ್ಲಿ ಪ್ರದರ್ಶನವನ್ನು ಮುಂದೂಡಲಾಯಿತು.
ಜೊತೆಗೆ ಎಲ್ಲಾ ಚಿತ್ರಮಂದಿರಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ವಾನದಳ ಸೇರಿದಂತೆ ಪೊಲೀಸರು ಪ್ರಮುಖ ಚಿತ್ರಮಂದಿರಗಳನ್ನು ಪರಿಶೀಲಿಸಿದ ಬಳಿಕ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಕೋಯಿಕ್ಕೋಡ್ನಲ್ಲಿ ಫ್ರಟರ್ನಿಟಿ ಮೂವ್ಮೆಂಟ್ ನೇತೃತ್ವದಲ್ಲಿ ಚಿತ್ರ ಬಿಡುಗಡೆ ವಿರೋಧಿಸಿ ಮೆರವಣಿಗೆ ನಡೆಯಿತು. ಬ್ಯಾರಿಕೇಡ್ ತಳ್ಳಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಕೂಡ ನಡೆಯಿತು.
ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ದಿ ಕೇರಳ ಸ್ಟೋರಿ ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆಯ ಕಥೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ಸಾಕಷ್ಟು ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ "ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು" ಚಿತ್ರ ಹೇಳುತ್ತದೆ ಎಂದು ಬದಲಾಯಿಸಲಾಗಿದೆ.
ಇದನ್ನೂ ಓದಿ: ಕೊಚ್ಚಿಯ ಎರಡು ಥಿಯೇಟರ್ನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ರದ್ದು