ಭಂಡಾರ ಒಡತಿ ಮಾಯಕ್ಕದೇವಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
🎬 Watch Now: Feature Video
ಚಿಕ್ಕೋಡಿ: ಪ್ರತಿ ವರ್ಷದಂತೆ ಈ ವರ್ಷವೂ ಗಡಿನಾಡಿನ ಶಕ್ತಿ ದೇವತೆ, ಭಂಡಾರ ಒಡತಿ ಚಿಂಚಲಿಯ ಮಾಯಕ್ಕ ದೇವಿಯ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭ ಗಳಿಗೆಯಿಂದ ಪ್ರಾರಂಭವಾಗುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆಯುವುದು ಇಲ್ಲಿ ಸಂಪ್ರದಾಯ.
ದೇವಿ ದರ್ಶನ ಪಡೆದ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು: ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿರುವ ರಾಯಭಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿಯ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದರು. ಮಹಾರಾಷ್ಟ್ರ, ಗೋವಾ, ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶದಿಂದ ಬಂದ ಭಕ್ತರು ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ನೆರೆದಿದ್ದ ಭಕ್ತಸಮೂಹ ಭಕ್ತಿ ಪರಾಕಾಷ್ಠೆ ಮೆರೆಯಿತು.
ಎತ್ತಿನಗಾಡಿಯಲ್ಲಿ ಜಾತ್ರೆಗೆ ಜನರು: ಮಾಯಕ್ಕಾ ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ)ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ, ಈ ಇದೇ ಸ್ಥಳದಲ್ಲಿ ನೆಲೆಯೂರಿದ್ದಾಳೆ ಎಂಬ ಐತಿಹಾಸಿಕ ಕಥೆಗಳು ತಿಳಿಸುತ್ತವೆ.
ಇಡೀ ಗ್ರಾಮವೇ ಭಂಡಾರಮಯ: ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಹಿರಿದೇವಿಯು ಚಿಂಚಲಿಯ ಗ್ರಾಮ ದೇವತೆ. ಮಾಯಕ್ಕಾದೇವಿ ಹಿರಿದೇವಿ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು ಎಂಬ ಪ್ರತೀತಿ ಇದೆ. ಇದರಿಂದ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ, ನಂತರ ಮಾಯಕ್ಕಾದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು. ಎತ್ತಿನ ಬಂಡಿಯಲ್ಲಿ ಬಂದು ದೇವರಿಗೆ ನೈವೇದ್ಯ ಅರ್ಪಿಸುವುದು ವಾಡಿಕೆಯಿದೆ. ಭಕ್ತಿ ಪರಾಕಾಷ್ಠೆಯಿಂದ ದೇವತೆಗೆ ಭಂಡಾರ ಎರಚುತ್ತಾರೆ. ಇಡೀ ಗ್ರಾಮವೇ ಭಂಡಾರಮಯವಾಗಿರುತ್ತದೆ. ಗ್ರಾಮಕ್ಕೆ ಚಿನ್ನದ ಹೊದಿಕೆ ಹಾಕಿದಂತೆ ಬಿಂಬಿತವಾಗುತ್ತದೆ.
ಇದನ್ನೂ ಓದಿ: ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಾಳೆ ಮಹಾ ಕುಂಭಾಭಿಷೇಕ