ಬೆಂಗಳೂರು: ಇಂದು ಪಾರ್ಶ್ವವಾಯು ದಿನ ಹಿನ್ನಲೆಯಲ್ಲಿ ಕೆಲ ಮಾಹಿತಿ ಹಂಚಿಕೊಂಡಿರುವ ನಗರದ ವಿವಿಧ ನರರೋಗ ತಜ್ಞರು, ಕೋವಿಡ್ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕೊರೊನಾ ಸೋಂಕಿತರು ಪಾರ್ಶ್ವವಾಯುವಿನಿಂದ (ಸ್ಟ್ರೋಕ್) ಬಳಲುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕೋವಿಡ್ನಿಂದಾಗಿ ಪಾರ್ಶ್ವವಾಯು ಬರುವ ಸಾಧ್ಯತೆ ಕಡಿಮೆ ಇದ್ದರೂ ಸಹ ನಿರ್ಲಕ್ಷ್ಯ ಬೇಡ. 40 ವರ್ಷಕ್ಕೂ ಮೇಲ್ಪಟ್ಟವರಿಗೆ ವೈರಸ್ ತಗುಲಿದ್ದು, ಅವರಿಗೆ ರಕ್ತದೊತ್ತಡ ಅಥವಾ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿದ್ದರೆ ಅವರು ಶೀಘ್ರದಲ್ಲೇ ವೈದ್ಯರನ್ನ ಸಂಪರ್ಕಿಸಬೇಕು. ವೈದ್ಯರು ಇಂತವರ ಮೆದುಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತಾರೆ. ಕೊರೊನಾದಿಂದ ಮೆದುಳಿನ ಮೇಲೆ ಆಗುವ ಪರಿಣಾಮದ ಬಗ್ಗೆ ಅಧ್ಯಯನ ನಡೆಯಬೇಕಿದೆ ಎಂದು ಡಾ. ಜಗದೀಶ್ ಹೇಳುತ್ತಾರೆ.
ಕೋವಿಡ್ ಮಾತ್ರವಲ್ಲ ಇತ್ತೀಚಿಗೆ ವರ್ಕ್ ಫ್ರಮ್ ಹೋಂನಿಂದಾಗಿ ಅನೇಕ ಜನರು ವ್ಯಾಯಾಮವಿಲ್ಲದೆ ಬೊಜ್ಜು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೆ ಸಿಗರೇಟ್ ಸೇವನೆ ಹಾಗೂ ಮದ್ಯಪಾನ ಕೂಡ ಸ್ಟ್ರೋಕ್ಗೆ ಆಹ್ವಾನ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಪಾರ್ಶ್ವವಾಯು ಬಾರದಂತೆ ತಡೆಯಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು, ವ್ಯಾಯಾಮ ಅತ್ಯಗತ್ಯ. ಇದು ಕೇವಲ ಪಾರ್ಶ್ವವಾಯುವಿಗೆ ಮಾತ್ರವಲ್ಲದೆ ಹೃದ್ರೋಗಕ್ಕೂ ಉತ್ತಮ ಎಂದು ವೈದ್ಯರು ವಿವರಿಸಿದರು.