ಬೆಂಗಳೂರು: ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ಜಾಗತಿಕವಾಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಮಲೇರಿಯಾ ಮುಕ್ತ ಜಗತ್ತನ್ನು ನಿರ್ಮಾಣಕ್ಕೆ ಮುಂದಾಗಬೇಕಿದೆ. ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಲಕ್ಷಾಂತರ ಜನರು ಇಂದು ಸೊಳ್ಳೆ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳ ಸದಸ್ಯರು ಮತ್ತು ಸಂಘಟನೆಗಳು ಮಲೇರಿಯ ತಡೆ ಮತ್ತು ಜಾಗೃತಿ ದಿನವಾಗಿ ಈ ದಿನವನ್ನು ಆಚರಿಸುತ್ತಿದೆ.
ಸಾವಿಗೆ ಕಾರಣವಾಗುವ ಸೊಳ್ಳೆ: ಬೇಸಿಗೆಯಲ್ಲಿ ಸಾಮಾನ್ಯವಾಗಿ ಅನೇಕ ಸಮಸ್ಯೆಗಳು ಹೆಚ್ಚು. ಇದರಲ್ಲಿ ಮಲೇರಿಯಾ ಕೂಡ ಒಂದು. ಮಲೇರಿಯಾ ಜ್ವರದ ಬಗ್ಗೆ ಜಾಗತಿಕವಾಗಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ಏಪ್ರಿಲ್ 25ನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ. ಬೇಸಿಗೆ ಕಾಲದಲ್ಲಿ ಸೊಳ್ಳೆಗಳು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅಂಕಿ - ಅಂಶದ ಪ್ರಕಾರ, ಪ್ರತಿ ವರ್ಷ 7 ಲಕ್ಷ ಜನರು ಮಲೇರಿಯಾಗೆ ಬಲಿಯಾಗುತ್ತಿದ್ದಾರೆ. ಹೆಣ್ಣು ಸೊಳ್ಳೆ ಕಡಿತದಿಂದ ಈ ಮಲೇರಿಯಾ ಜ್ವರ ಉಲ್ಬಣಗೊಳ್ಳುತ್ತದೆ. ಇದಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಸಾವಿಗೆ ಕಾರಣವಾಗುತ್ತದೆ.
ಮಲೇರಿಯಾ ಜ್ವರ ಸಾಂಕ್ರಾಮಿಕ ಜ್ವರವಾಗಿದ್ದು, ಅನಾಫಿಲಿಸ್ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಈ ಅನಾಫಿಲಿಸ್ ಸೊಳ್ಳೆ ಕಚ್ಚಿದಾಗ ಅದು ಪ್ಲಾಸ್ಮೊಡಿಯಂ ಪರಸೈಟ್ ಅನ್ನು ಬಿಡುಗಡೆ ಮಾಡುತ್ತದೆ. ಈ ಸೊಳ್ಳೆ ಅತಿ ಹೆಚ್ಚು ಮಳೆ ಬೀಳುವ, ಚರಂಡಿ, ನದಿ ಕೆನಾಲ್, ಕಾಲುವೆ, ಭತ್ತದ ಗದ್ದೆ, ಬಾವಿ, ಕೆರೆ, ಅಶುದ್ದ ನೀರಿನಲ್ಲಿ ವಾಸವಾಗಿರುತ್ತದೆ. ಈ ಸೊಳ್ಳೆ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಕಡಿಯುತ್ತದೆ.
ಮಲೇರಿಯಾದಲ್ಲಿ ಅಪಾಯಕಾರಿ ರೂಪ ಎಂದರೆ ಪಿ ಆಗಿದೆ. ವೈವಾಕ್ಸ್, ಫಾಲ್ಸಿಪ್ಯಾರಮ್ ಮಲೇರಿಯಾ. ಶೀತ, ತೀವ್ರ ಜ್ವರ, ತಲೆ ನೋವು ಮತ್ತು ವಾಂತಿ ಈ ರೋಗದ ಲಕ್ಷಣ,. ಈ ಲಕ್ಷಣಗಳು ಗೋಚರಿಸಿದಾಗ ತಕ್ಷಣಕ್ಕೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಉಲ್ಬಣವಾಗಿ, ಸಾವಿಗೆ ಕಾರಣವಾಗುತ್ತದೆ. ಮಲೇರಿಯಾದಿಂದ ಜಾಂಡೀಸ್, ರಕ್ತಹೀನತೆ ಮತ್ತು ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಭಾರತದಲ್ಲಿ ಮಲೇರಿಯಾ: ಭಾರತ 2027ರ ವೇಳೆ ಮಲೇರಿಯಾ ಮುಕ್ತವಾಗುವ ಸಂಕಲ್ಪ ಮಾಡಿದ್ದು, 2030ರ ವೇಳೆ ಇದನ್ನು ಸಂಪೂರ್ಣವಾಗಿ ತೊಡೆದು ಹಾಕಲು ನಿರ್ಣಯಿಸಿದೆ. ಆದರೆ, ಇದರಲ್ಲಿ ಕೆಲವು ಸವಾಲುಗಳು ಮತ್ತು ನಿರ್ಣಾಯಕಗಳಿಂದ ಕೂಡ ಇವೆ. 2018 ಮತ್ತು 2022ರ ನಡುವೆ ದೇಶದಲ್ಲಿ ಶೇ 66ರಷ್ಟು ಮಲೇರಿಯಾ ಪ್ರಕರಣಗಳು ಕಡಿಮೆ ಆಗಿವೆ. ಇನ್ನು ಈ ಕುರಿತು ಮಾತನಾಡಿರುವ ಐಸಿಎಂಆರ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿಲಿಮಾ ಕ್ಷೀರ ಸಾಗರ್, ಭಾರತ ಕೋವಿಡ್ ನಿಯಂತ್ರಣ ಮಾಡಿದ ಯಶಸ್ಸು ಗಮನಿಸಿದಾಗ ಇದು ಸಾಧ್ಯ. ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬೆಂಬಲದೊಂದಿಗೆ ಮಲೇರಿಯಾ ನಿಯಂತ್ರಣ ಮತ್ತು ನಿರ್ಮೂಲನೆ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಲ್ಝೈಮರ್ ಪ್ರೋಟಿನ್ ಮಟ್ಟ ಕುಗ್ಗಿಸುತ್ತದೆ ನಿದ್ರೆ ಮಾತ್ರೆ; ಅಧ್ಯಯನದಲ್ಲಿ ಪತ್ತೆ