ಪ್ರತಿಯೊಬ್ಬರೂ ಸ್ಟ್ರಾಂಗ್, ಮೃದುವಾದ, ಹೊಳೆಯುವ ಕೂದಲನ್ನು ಬಯಸುತ್ತಾರೆ. ಆದರೆ, ಆ ರೀತಿ ಕೂದಲು ಆಗುವುದಕ್ಕೆ ಬೇಕಾದ ಕ್ರಮಗಳನ್ನೇ ಅವರು ಪಾಲಿಸಿರಲ್ಲ. ನಿಮಗೆ ಸ್ಟ್ರಾಂಗ್, ಶೈನಿ ಕೂದಲು ಬೇಕೆಂದರೆ ಕಡ್ಡಾಯವಾಗಿ ಎಣ್ಣೆ ಹಚ್ಚಬೇಕಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೇರ್ ಕಂಡಿಷನರ್ ಮತ್ತು ಸೀರಮ್ಗೆ ಆದ್ಯತೆ ನೀಡುತ್ತದೆ. ಇದರಿಂದಾಗಿ ಕೂದಲಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕೂದಲಿಗೆ ಎಣ್ಣೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಎಂಬ ಮಾಹಿತಿ ಹೀಗಿದೆ.
ಎಣ್ಣೆ ಮಸಾಜ್ನಿಂದಾಗುವ ಪ್ರಯೋಜನಗಳೇನು?
- ಎಣ್ಣೆ ಮಸಾಜ್ ಮಾಡುವುದರ ಪ್ರಯೋಜನಗಳು ಕೇವಲ ಕೂದಲಿಗೆ ಮಾತ್ರ ಸೀಮಿತವಾಗಿಲ್ಲ. ನೆತ್ತಿಗೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.
- ಎಣ್ಣೆ ಹಚ್ಚುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
- ಕೂದಲಿಗೆ ಎಣ್ಣೆ ಹಚ್ಚುವುದರಿಂದ ತಲೆನೋವು, ಒತ್ತಡ ನಿವಾರಿಸುತ್ತದೆ
- ನೆತ್ತಿಯಲ್ಲಿ ಮುಚ್ಚಿರುವ ರಂಧ್ರಗಳನ್ನು ತೆರೆಯುತ್ತದೆ, ಕೂದಲು ಸ್ಟ್ರಾಂಗ್ ಆಗುತ್ತದೆ.
- ಕೂದಲು ಕವಲು ಒಡೆಯುವುದು, ಉದುರುವುದನ್ನು ತಪ್ಪಿಸುತ್ತದೆ, ನಿದ್ರಾಹೀನತೆ ಕಡಿಮೆ ಮಾಡುತ್ತದೆ.
- ನಿಯಮಿತವಾಗಿ ತಲೆಗೆ ಎಣ್ಣೆ ಹಚ್ಚುವುದರಿಂದ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ನೆತ್ತಿಯ ನೈಸರ್ಗಿಕ ತೇವಾಂಶ ಹೆಚ್ಚಿಸುತ್ತದೆ.
ಕೂದಲಿಗೆ ಎಣ್ಣೆ ಹಚ್ಚುವುದ್ಹೇಗೆ?
ಯಾವ ಎಣ್ಣೆಯನ್ನು ಹಚ್ಚುತ್ತೀರೋ ಅದನ್ನು ಮೊದಲಿಗೆ ಉಗುರು ಬೆಚ್ಚಗೆ ಮಾಡಿ, ಬಳಿಕ ಕೂದಲಿನ ಬೇರುಗಳಿಗೆ ಸರಿಯಾಗಿ ಎಣ್ಣೆ ಹಚ್ಚಿ. 10-15 ನಿಮಿಷಗಳ ಕಾಲ ಮಸಾಜ್ ಮಾಡಿ. ಒಂದು ಗಂಟೆ ಹಾಗೇ ಬಿಡಿ. ಬೆಚ್ಚಗಿನ ನೀರಿನಲ್ಲಿ ಟವಲ್ ಅದ್ದಿ, ಅದನ್ನು ಪೇಟದಂತೆ ತಲೆಗೆ ಸುತ್ತಿಕೊಳ್ಳಿ. ಐದು ನಿಮಿಷಗಳಿಗೊಮ್ಮೆ ಹೀಗೆ ಮೂರು ನಾಲ್ಕು ಬಾರಿ ಮಾಡಿ. ಈ ಪ್ರಕ್ರಿಯೆ ನೆತ್ತಿ ಎಣ್ಣೆ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬಳಿಕ ಕೂದಲನ್ನು ಶಾಂಪು ಅಥವಾ ಸೀಗೆಕಾಯಿಯಿಂದ ತೊಳೆಯಿರಿ.
ಕೆಲವರು ಮಸಾಜ್ ಮಾಡಿದ ಬಳಿಕ ರಾತ್ರಿಯಿಡೀ ಕೂದಲಲ್ಲೇ ಎಣ್ಣೆ ಬಿಡಲು ಇಷ್ಟಪಡುತ್ತಾರೆ. ಅಂಥ ಸಂದರ್ಭದಲ್ಲಿ ಕೂದಲನ್ನು ಸಡಿಲವಾಗಿ ಕಟ್ಟಿಕೊಳ್ಳಿ. ಬೆಳಗ್ಗೆ ತೊಳೆಯಿರಿ. ರಾತ್ರಿಯಿಡೀ ತಲೆಯಲ್ಲಿ ಎಣ್ಣೆ ಬಿಡುವುದರಿಂದ ಚಳಿಗಾಲದಲ್ಲಿ ನೆಗಡಿಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ನಿಮ್ಮ ಕೂದಲಿಗೆ ಯಾವ ಎಣ್ಣೆ ಉತ್ತಮ?
ಚರ್ಮದಂತೆಯೇ, ನೆತ್ತಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಕೂದಲು ಮತ್ತು ನೆತ್ತಿಯ ಪ್ರಕಾರಕ್ಕೆ ಹೊಂದುವ ಎಣ್ಣೆಯನ್ನು ಆರಿಸುವುದು ಮುಖ್ಯ. ನಿಮ್ಮ ಕೂದಲಿಗೆ ಹೊಂದುವ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು.