ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ರಾಜ್ಯದ ಡಂಘೀ ಪ್ರಕರಣಗಳ ರೋಗಿಗಳು ಮತ್ತು ಸಾವಿನ ಸಂಖ್ಯೆಯ ದತ್ತಾಂಶವನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ನೀಡಲು ಹಿಂದೇಟು ಹಾಕುತ್ತಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.
ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ಪ್ರತಿ ರಾಜ್ಯಗಳು ಡೆಂಘೀ ಪ್ರಕರಣಗಳ ಕುರಿತು ಮಾಹಿತಿಯ ದತ್ತಾಂಶವನ್ನು ನೀಡುವುದು ಅವಶ್ಯಕ. ಆದರೆ, ಪಶ್ಚಿಮ ಬಂಗಾಳ ಕೇಂದ್ರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ವೆಬ್ಸೈಟ್ನಲ್ಲಿ (ಎನ್ಸಿವಿಬಿಡಿಸಿ) ಈ ಸಂಬಂಧ ಯಾವುದೇ ಅಂಕಿ ಅಂಶಗಳಿಲ್ಲ ಎಂದು ದೂರಲಾಗಿದೆ.
ಮತ್ತೊಂದು ಅಚ್ಚರಿಯ ಅಂಶ ಏನೆಂದರೆ, ಪಶ್ಚಿಮ ಬಂಗಾಳ ಆರೋಗ್ಯ ಸಚಿವಾಲಯವು ಈ ವರ್ಷ ಡೆಂಘೀ ಪ್ರಕರಣದ ಕುರಿತು ನಿಯಮಿತ ಮಾಹಿತಿಯ ವಾರದ ದತ್ತಾಂಶವನ್ನು ಕೂಡಾ ಅಧಿಕೃತವಾಗಿ ಹಂಚಿಕೊಂಡಿಲ್ಲ. ಈ ಸಂಬಂಧ ಕಳೆದ ವರ್ಷ ಕಡೇಯದಾಗಿ ಮಾಹಿತಿ ಹಂಚಿಕೊಂಡಿತ್ತು.
ಅನಧಿಕೃತ ಮೂಲಗಳು ಹೇಳುವಂತೆ, ಸೆಪ್ಟೆಂಬರ್ 24ರವರೆಗೆ ರಾಜ್ಯದಲ್ಲಿ 38 ಸಾವಿರ ಮಂದಿ ಡೆಂಘೀ ಪರಿಣಾಮಕ್ಕೆ ಒಳಗಾಗಿದ್ದಾರೆ. ರಾಜಕೀಯ ಕೆಸರೆರಚಾಟದಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಇದೊಂದು ಮಾನವನಿರ್ಮಿತ ಪರಿಸ್ಥಿತಿಯ ಎಚ್ಚರಿಕೆಯಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ತಿಳಿಸಿದ್ದಾರೆ.
'ವೈದ್ಯರಿಂದಲೂ ಮರೆಮಾಚುವ ಯತ್ನ': ಇದು ಮಾನವ ನಿರ್ಮಿತ ಡೆಂಘೀ. ಸರ್ಕಾರ ಈ ಬಗ್ಗೆ ಮಾಹಿತಿ ಹೊಂದಿತ್ತು. ಆದರೆ ಅವರು ತಮ್ಮ ಜನರ ಬಗ್ಗೆ ಗಂಭೀರವಾಗಿಲ್ಲ. ವೈದ್ಯರಿಗೂ ಕೂಡ ಡೆಂಘೀ ಸಾವಿನ ಪ್ರಕರಣ ಕುರಿತು ತಿಳಿಸದಂತೆ ಸೂಚಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಲಾಗಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ವಿರೋಧ ಪಕ್ಷ ಕೂಡ ಇದೇ ಆರೋಪ ಹೊರಿಸಿದೆ. ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಡೆಂಘೀ ಪ್ರಕರಣ ಸಂಬಂಧ ವರದಿ ಸಲ್ಲಿಸುತ್ತಿವೆ. ಆದರೆ ಪಶ್ಚಿಮ ಬಂಗಾಳ ಮಾತ್ರ ರಾಜ್ಯದ ಡೆಂಘೀ ಸಾವಿನ ಪ್ರಕರಣಗಳ ಕುರಿತು ದತ್ತಾಂಶವನ್ನು ಸಲ್ಲಿಸುತ್ತಿಲ್ಲ. ನಾವು ಗಮನಿಸಿರುವಂತೆ ರಾಜ್ಯದಲ್ಲಿ ಈ ಋತುಮಾನದಲ್ಲಿ ಡೆಂಘೀಯಿಂದಾಗಿ 100 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದು, ಡೆಂಘೀ ಸಾವಿನ ಪ್ರಕರಣಗಳ ವರದಿಯನ್ನು ತಿಳಿಯದ ರೋಗದ ಸಾವು ಎಂದು ವರದಿ ಮಾಡುವಂತೆ ವೈದ್ಯರಿಗೆ ಒತ್ತಡ ಹೇರುತ್ತಿದೆ ಎಂದರು.
ರಾಜ್ಯದಲ್ಲಿ ಡೆಂಘೀ ಪ್ರಕರಣಗಳನ್ನು ಮುಚ್ಚಿಡುವ ಮೂಲಕ ಹೊಸ ಅಪಾಯವನ್ನು ತಂದುಕೊಳ್ಳುತ್ತಿದೆ ಎಂದು ವೈದ್ಯರು ಕೂಡ ತಿಳಿಸಿದ್ದಾರೆ. ಆರೋಗ್ಯ ಸೇವಾ ವೈದ್ಯರ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಡಾ.ಮಾನಸ್ ಗುಮ್ಟಾ ಮಾತನಾಡಿ, "ಡೆಂಘೀ ಹಾವಳಿಯನ್ನು ಈ ರೀತಿ ಸತ್ಯಾಂಶವನ್ನು ಹತ್ತಿಕ್ಕುವ ಮೂಲಕ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದರಿಂದ ಮತ್ತಷ್ಟು ಗೊಂದಲ ಮೂಡುತ್ತದೆ" ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಲ್ಲೆಡೆ ಹೆಚ್ಚುತ್ತಿದೆ ಡೆಂಘೀ; ಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ತಜ್ಞರ ಸಲಹೆ