ವಿಟಮಿನ್ ಡಿ ಆರೋಗ್ಯಯುತ ಮೂಳೆಗಳಿಗೆ ಮಾತ್ರವಲ್ಲ, ದೇಹದ ಪೋಷಕಾಂಶವನ್ನು ಹೀರಿಕೊಳ್ಳಲು ಕೂಡ ಅತ್ಯಗತ್ಯ. ಜೊತೆಗೆ ಇತರ ಚಟುವಟಿಕೆಗಳಿಗೂ ಈ ವಿಟಮಿನ್ ಡಿ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ದೇಹಕ್ಕೆ ದೈನಂದಿನ ಪ್ರಮಾಣದಷ್ಟು ವಿಟಮಿನ್ ಡಿ ಅತ್ಯಗತ್ಯವಾಗಿದೆ. ಈ ವಿಟಮಿನ್ ಡಿ ಪ್ರಮಾಣ ದೇಹದಲ್ಲಿ ಕಡಿಮೆಯಾದರೆ ಅದು ಕ್ಯಾನ್ಸರ್ ಅಪಾಯಕ್ಕೂ ಕಾರಣವಾಗುತ್ತದೆ. ಈ ಕುರಿತು ಜರ್ಮನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ ಅಧ್ಯಯನ ನಡೆಸಿದೆ. ಈ ಸಂಶೋಧನೆಯಲ್ಲಿ ವಿಟಮಿನ್ ಡಿ ಸೇವನೆಯಿಂದ ವಿಶೇಷವಾಗಿ 70 ವರ್ಷ ಮೇಲ್ಪಟ್ಟವರಲ್ಲಿ ಕ್ಯಾನ್ಸರ್ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ.
ಜರ್ಮನ್ ಕ್ಯಾನ್ಸರ್ ರಿಸರ್ಚ್ ಸೆಂಟರ್‌ನಲ್ಲಿ ಕ್ಲಿನಿಕಲ್ ಎಪಿಡೆಮಿಯಾಲಜಿ ಮತ್ತು ಏಜಿಂಗ್ ರಿಸರ್ಚ್ ವಿಭಾಗದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಂಶೋಧಕ ಡಾ ಬೆನ್ ಶಾಟ್ಕರ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ಏಜಿಂಗ್ ರಿಸರ್ಚ್ ರಿವ್ಯೂಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಹಿಂದೆ ಕೂಡ ಅನೇಕ ಸಂಶೋಧನೆಗಳು ವಿಟಮಿನ್ ಡಿ ಮತ್ತು ಕ್ಯಾನ್ಸರ್ ನಡುವಿನ ಸಂಬಂಧದ ಕುರಿತು ಅಧ್ಯಯನ ನಡೆಸಿದೆ. ಆದರೆ, ಅವರು ಸ್ಪಷ್ಟವಾದ ಅನಿಸಿಕೆಗಳನ್ನು ನೀಡಿಲ್ಲ. ಆದಾಗ್ಯೂ ಕೆಲವು ಅಧ್ಯಯನಗಳು ವಿಟಮಿನ್ ಡಿ ಪೂರಕಗಳು ಕ್ಯಾನ್ಸರ್ ಸಾವಿನ ಅಪಾಯವನ್ನು ಕಡಿಮೆ ಮಾಡುವ ಕುರಿತು ತಿಳಿಸಿವೆ. ಈ ಹಿಂದಿನ ಅಧ್ಯಯನವನ್ನು ಆಧಾರವಾಗಿರಿಸಿಕೊಂಡು ಡಾ ಶಾಟ್ಕರ್ ಮತ್ತು ಇತರ ಸಂಶೋಧಕರು ವಿಟಮಿನ್ ಡಿ3 ಪ್ರಯೋಜನ ಕುರಿತು ಅಧ್ಯಯನ ನಡೆಸಿದ್ದಾರೆ.
ಈ ಅಧ್ಯಯನದಲ್ಲಿ ಸಂಶೋಧಕರು 14 ಇತರ ಅಧ್ಯಯನ ವರದಿಗಳು ಮತ್ತು 1,05,000 ಜನರ ದತ್ತಾಂಶವನ್ನು ವಿಶ್ಲೇಷಣೆ ನಡೆಸಿದ್ದಾರೆ. ವಿಟಮಿನ್ ಡಿ3 ಅಥವಾ ಪ್ಲೆಸೆಬೊ ಸೇವನೆ ಮಾಡುವರನ್ನು ಮಾತ್ರ ಅಧ್ಯಯನದ ಭಾಗವಾಗಿಸಿಟ್ಟುಕೊಳ್ಳಲಾಗಿತ್ತು. ನಿತ್ಯ ವಿಟಮಿನ್ ಡಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಾವಿನ ಅಪಾಯ ಕಡಿಮೆ ಮಾಡಬಹುದು ಎಂದು ಫಲಿತಾಂಶ ತಿಳಿಸಿದೆ.
ಈ ಅಧ್ಯಯನದಲ್ಲಿ ವಿಟಮಿನ್ ಡಿ ಪೂರಕವನ್ನು ನಿತ್ಯ ಸೇವನೆ ಮಾಡದವರನ್ನು ಕೂಡ ಪರೀಕ್ಷೆ ನಡೆಸಲಾಗಿದೆ. ಒಂದು ಹಂತದಲ್ಲಿ ಈ ಅಧ್ಯಯನ ಕ್ಯಾನ್ಸರ್ ಸಾವಿನ ಮೇಲೆ ವಿಟಮಿನ್ ಡಿ ಪರಿಣಾಮವನ್ನು ಗಣನೀಯವಾಗಿ ತೋರಿಸದೇ ಹೋದರೂ ಮತ್ತೊಂದು ಕಡೆ ವಿಟಮಿನ್ ಡಿ ಸೇವನೆ ಮಾಡುವ ಭಾಗಿದಾರರಲ್ಲಿ ಇದು ಶೇ 12ರಷ್ಟು ಕ್ಯಾನ್ಸರ್ ಅಪಾಯವನ್ನು ತಗ್ಗಿಸಿದೆ. ಜೊತೆಗೆ ಇದು ಮೂಳೆಗಳ ಆರೋಗ್ಯಕ್ಕೂ ಪ್ರಯೋಜನವಾಗಿದೆ.
- ವೈದ್ಯರ ಅನುಸಾರ ವಿಟಮಿನ್ ಡಿ ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಹೊಂದಿದೆ. ಅದರ ಕೆಲವು ಮಾಹಿತಿ ಇಲ್ಲಿದೆ.
- ಇದು ಕ್ಯಾಲ್ಸಿಯಂ ಹೀರಿಕೊಂಡು ಮೂಳೆಗಳನ್ನು ಬಲವಾಗಿಸುತ್ತದೆ.
- ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.
- ದೇಹದಲ್ಲಿ ಊರಿಯೂತಗಳನ್ನು ಕಡಿಮೆ ಮಾಡುತ್ತದೆ
- ಸ್ನಾಯು ಬೆಳವಣಿಗೆ ಮತ್ತು ಅಭಿವೃದ್ಧಿಗೆ ವಿಟಮಿನ್ ಡಿ ಸಹಾಯ ಮಾಡುತ್ತದೆ.
- ಆರೋಗ್ಯಯುತ ನರ ವ್ಯವಸ್ಥೆ ಅಭಿವೃದ್ಧಿಗೊಳ್ಳುವಂತೆ ನೋಡಿಕೊಳ್ಳುತ್ತದೆ.
ಯಾವ ಯಾವ ಪದಾರ್ಥದಲ್ಲಿ ವಿಟಮಿನ್ ಡಿ ದೊರೆಯುತ್ತದೆ?: ಸಾಮಾನ್ಯವಾಗಿ ವ್ಯಕ್ತಿಗಳು ವಿಟಮಿನ್ ಡಿ ಅನ್ನು ಪೂರಕ ಅಥವಾ ಸೂರ್ಯನ ಕಿರಣಗಳಿಂದ ನೇರವಾಗಿ ಪಡೆಯಬಹುದಾಗಿದೆ. ವಿಟಮಿನ್ ಡಿ ಫ್ಯಾಟಿ ಫಿಶ್ ಮತ್ತು ಇತರ ಸಮುದ್ರದ ಆಹಾರ, ಮೊಟ್ಟೆಯ ಹಳದಿ ಭಾಗ, ಕಾಡ್ ಲಿವರ್ ಆಯಿಲ್, ಜ್ಯೂಸ್ ಮತ್ತು ಡೈರಿ ಉತ್ಪನ್ನ ಸೇರಿದಂತೆ ಕಲವು ತರಕಾರಿಗಳ ಮೂಲಕ ಪಡೆಯಬಹುದು. ಪ್ರತಿನಿತ್ಯ ವ್ಯಕ್ತಿಯೊಬ್ಬನಿಗೆ 400 ರಿಂದ 800 ಐಯಿ ವಿಟಮಿನ್ ಡಿ ಬೇಕಾಗುತ್ತದೆ.
ಇನ್ನು ವಿಟಮಿನ್ ಡಿಯಿಂದ ಕಾಡುವ ಸಮಸ್ಯೆಗಳು ಎಂದರೆ, ಸುಸ್ತು, ಮೂಳೆ ನೋವು, ಸ್ನಾಯು ದುರ್ಬಲತೆ ಮತ್ತು ನೋವು, ಕೀಲಿನಲ್ಲಿ ಬಿಗಿತನ, ಖಿನ್ನತೆ, ನಿದ್ದೆಯ ಕೊರತೆ ಕಾಡುತ್ತದೆ.
ಇದನ್ನೂ ಓದಿ: Vitamin D: ವಿಟಮಿನ್ ಡಿ ಕೊರತೆಯಿಂದ ಮಕ್ಕಳಲ್ಲಿ ಹಲವು ಸಮಸ್ಯೆ