ನಿಮ್ಮ ಮೂಡ್ ತಾಜಾತನಗೊಳ್ಳಲು ಒಂದು ಕಪ್ ಚಹಾ ಸಾಕು. ಕೆಲವರಿಗಂತೂ ಬೆಳಗಿನ ಹೊತ್ತು ಒಂದು ಕಪ್ ಟೀ ಬೇಕೇ ಬೇಕು. ಇದರಿಂದ ಅವರಿಗೆ ಹೊಸತನ ದೊರೆಯುತ್ತದೆ. ಇಡೀ ದಿನ ಉಲ್ಲಸಿತದಿಂದಿರಲು ಇದು ಸಹಾಯಕ. ಅದರಲ್ಲೂ ಕೆಲಸದ ವೇಳೆ ಟೀ ಬ್ರೇಕ್ ತೆಗೆದುಕೊಳ್ಳುವುದರಿಂದ ಏಕಾಗ್ರತೆ ಮತ್ತು ಸರಿಯಾಗಿ ಚಿಂತಿಸಲು ನೆರವಾಗುತ್ತದೆ. ನಿಮ್ಮ ನೆಚ್ಚಿನ ಟೀ ಸ್ವಾದವನ್ನು ಇನ್ನಷ್ಟು ಹೆಚ್ಚಿಸಲು ಅನೇಕ ರೀತಿಯ ಟೀಗಳ ಆಯ್ಕೆಯೂ ನಿಮಗಿದೆ.
ಮಸಾಲಾ ಚಾಯ್: ಮಸಾಲಾ ಚಾಯ್. ಇದು ಭಾರತೀಯರ ಮಸಾಲಾ ಪದಾರ್ಥಗಳಿಂದ ತಯಾರಿಸುವ ಅದ್ಭುತ ಟೀ. ಭಿನ್ನವಾಗಿರುವ ಈ ಟೀಯಲ್ಲಿ ಶುಂಠಿ, ಮಸಾಲಾ ಪದಾರ್ಥಗಳಾದ ಕಾಳು ಮೆಣಸು, ಚಕ್ಕೆ ಅಥವಾ ಏಲಕ್ಕಿಯ ಘಮವಿದೆ. ಬೆಳಗ್ಗಿನ ಹೊತ್ತು ನಿಮ್ಮಲ್ಲಿ ಚೈತನ್ಯ ಮೂಡಿಸಲು, ಮನಸ್ಸನ್ನು ಪ್ರಶಾಂತಗೊಳಿಸಲು ಇದು ಸಹಾಯಕ.
ಗ್ರೀನ್ ಟೀ: ಗ್ರೀನ್ ಟೀ ಕೇವಲ ಸಂಜೆ ಹೊತ್ತಿಗೆ ಮಾತ್ರ ಸೀಮಿತ ಎಂದೇನೂ ಇಲ್ಲ. ದೇಹ ಮತ್ತು ಮನಸ್ಸಿನ ಖುಷಿಗೆ ಇದು ನಿಮ್ಮ ಆಯ್ಕೆಯಾಗಿರಲಿ. ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ಗ್ರೀನ್ ಟೀಯಲ್ಲಿ ತಾಜಾ ಮತ್ತು ಒಣಗಿದ ಹಸಿರೆಲೆಗಳಿವೆ. ಇವು ದೇಹ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುವುದರೊಂದಿಗೆ ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗುಣ ಕ್ಯಾನ್ಸರ್ ಅಪಾಯ ತಗ್ಗಿಸುತ್ತದೆ.
ಲೆಮನ್ (ನಿಂಬೆ) ಟೀ: ಸುಲಭ ಮತ್ತು ಬೇಗವಾಗಿ ತಯಾರು ಮಾಡುವ ಸರಳ ಟೀ ಇದು. ಬಿಸಿ ನೀರನ್ನು ಟೀ ಎಲೆಗಳಿಂದ ಚೆನ್ನಾಗಿ ಕುದಿಸಿ, ಶೋಧಿಸಿದ ಬಳಿಕ ಅದಕ್ಕೆ ಸಕ್ಕರೆ ಮತ್ತು ನಿಂಬೆ ಹಣ್ಣಿನ ರಸವನ್ನು ಹಿಂಡಿದರೆ, ರುಚಿಯಾದ ಲೆಮನ್ ಟೀ ಸಿದ್ದ. ನಿಂಬೆ ಟೀಯನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ಮೂಡ್ ರಿಫ್ರೆಶ್ ಆಗುತ್ತದೆ. ಇದೂ ಕೂಡ ಕ್ಯಾನ್ಸರ್, ಮಧುಮೇಹ, ಅರ್ಥೋರಿಟಿಸ್ ಮತ್ತು ಇತರೆ ದೀರ್ಘ ಕಾಯಿಲೆಯ ಅಪಾಯ ಕಡಿಮೆ ಮಾಡಬಲ್ಲದು.
ಶುಂಠಿ-ನಿಂಬೆ ಬ್ಲಾಕ್ ಟೀ: ಜಿಂಜರ್ ಲೆಮನ್ ಬ್ಲಾಕ್ ಟೀ ಕೂಡ ಸರಳ ಮತ್ತು ಸಮರ್ಥನೀಯ ಪಾನೀಯ. ಹಾಲಿಲ್ಲದೇ ತಯಾರಿಸುವ ಈ ಟೀ ದೇಹದ ತೂಕ ಇಳಿಕೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕು. ಇದು ಹೃದಯ ಸಂಬಂಧಿ ಸಮಸ್ಯೆಯ ಅಪಾಯ ತಡೆಯುತ್ತದೆ.
ಆದ್ರಕ್ ಚಾಯ್: ಭಾರತೀಯ ಶೈಲಿಯ ಟೀಯಲ್ಲಿಯೂ ಕೂಡ ತಾಜಾ ತುರಿದ ಶುಂಠಿಯನ್ನು ಬಳಕೆ ಮಾಡಲಾಗುವುದು. ಕುದಿಯುತ್ತಿರುವ ನೀರಿಗೆ ಟೀ ಎಲೆ ಜೊತೆ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಆ ಬಳಿಕ ಕೊನೆಯಲ್ಲಿ ಹಾಲನ್ನು ಹಾಕಿ ಮತ್ತೊಂದೆರಡು ನಿಮಿಷ ಕುದಿಸಿ ಶೋಧಿಸಿದರೆ, ಆದ್ರಕ್ ಚಾಯ್ ರೆಡಿ. ಉಸಿರಾಟದ ಸಮಸ್ಯೆ, ಹೊಟ್ಟೆ ಸಮಸ್ಯೆಗೆ ಇದು ಉತ್ತಮ.
ಇದನ್ನೂ ಓದಿ: ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ