ನವದೆಹಲಿ: ಕೋವಿಡ್ ಬಳಿಕ ಜಗತ್ತು ಸಹಜ ಸ್ಥಿತಿಗೆ ಮರಳಿದ್ದು, ಜನರು ಪ್ರವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ವರ್ಷದಿಂದ ಪ್ರವಾಸೋದ್ಯಮ ಕ್ಷೇತ್ರವೂ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಕೋವಿಡ್ನಿಂದಾಗಿ ಪ್ರವಾಸ ನಿಲ್ಲಿಸಿದ್ದ ಜನರು ಮತ್ತೆ ತಮ್ಮ ನೆಚ್ಚಿನ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ.
ಜನರ ಪ್ರವಾಸ ಪ್ರವೃತ್ತಿಯಲ್ಲಿಯೂ ಗಮನಾರ್ಹ ಬದಲಾವಣೆ ಕಂಡುಬಂದಿದೆ. ನವದೆಹಲಿ, ಬೆಂಗಳೂರು, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳನ್ನು ಜನರು ತಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸುತ್ತಿರುವುದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದರ ಜೊತೆಗೆ, ಮನಾಲಿ ಮತ್ತು ರಿಷಿಕೇಶದಂತಹ ಗಿರಿಶಿಖರಗಳು ಅವರ ಆದ್ಯತಾ ಪಟ್ಟಿ ಸೇರಿವೆ. 2023ರ ಮೊದಲಾರ್ಧದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡಿದ್ದು, ಜನರು ಹೋಟೆಲ್, ರೆಸಾರ್ಟ್, ಗೆಸ್ಟ್ ಹೌಸ್, ಹೋಂಸ್ಟೇ, ಹಾಸ್ಟೆಲ್, ಅಪಾರ್ಟ್ಮೆಂಟ್ ಹಾಗು ವಿಲ್ಲಾದಂತಹ ಪರ್ಯಾಯ ವ್ಯವಸ್ಥೆಯಲ್ಲಿ ವಾಸ್ತವ್ಯ ಹೂಡಲು ಇಚ್ಚಿಸಿದ್ದಾರೆ.
2023ರ ಮೊದಲಾರ್ಧದಲ್ಲಿ ಭಾರತೀಯರ ದೇಶದೊಳಗಿನ ಮತ್ತು ವಿದೇಶ ಪ್ರವಾಸದ ಆದ್ಯತೆಗಳ ಕುರಿತು ಬುಕ್ಕಿಂಗ್.ಕಾಮ್ ತಿಳಿಸಿದೆ. ಭಾರತೀಯರರು ತಮ್ಮ ಪ್ರವಾಸದ ಬಗ್ಗೆ ಹೆಚ್ಚು ಆಶಾವಾದಿಗಳಾಗಿದ್ದು, ಈ ಕಾರಣದಿಂದ ತಮ್ಮ ಮುಂದಿನ ಪ್ರಯಾಣದ ಬುಕ್ಕಿಂಗ್ ಸೇರಿದಂತೆ ಇನ್ನಿತರ ಕಾರ್ಯಾಚರಣೆಗಳನ್ನು ಮುಂಚೆಯೇ ಮಾಡುತ್ತಿರುವ ಪ್ರವೃತ್ತಿ ಗೋಚರವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸ ಎಂಬುದು ವ್ಯಾಪಕವಾಗಿ ಜನಪ್ರಿಯತೆ ಪಡೆಯುತ್ತಿದೆ. ಉದ್ಯಮ ಎದುರಿಸುತ್ತಿರುವ ಸವಾಲುಗಳ ನಡುವೆಯೂ ಜನರಲ್ಲಿ ಪ್ರವಾಸದ ಅಭಿರುಚಿ ಜಾಸ್ತಿಯಾಗುತ್ತಿದೆ. 2023ಕ್ಕೆ ಹೋಲಿಸಿದರೆ, ಈ ಪ್ರಯಾಣದ ಆಸಕ್ತಿ ಜನರಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಾಗ, ಭಾರತದ ಪ್ರಯಾಣಿಕರು ತಮ್ಮ ಭವಿಷ್ಯದ ಪ್ರಯಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಶೇ 86ರಷ್ಟು ಅಭಿವೃದ್ಧಿ ಕಾಣಬಹುದಾಗಿದೆ. ಪ್ರಯಾಣದ ವಲಯವೂ ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ನಿರೀಕ್ಷೆ ಇದೆ.
ಪ್ರಸ್ತುತ ವರ್ಷ ಭಾರತೀಯ ಪ್ರಯಾಣಿಕರು ಹೆಚ್ಚು ಪ್ರಯಾಣ ಬೆಳೆಸಿರುವ ಸ್ಥಳಗಳ ಪಟ್ಟಿ ಇಂತಿದೆ.
- ನವದೆಹಲಿ
- ಜೈಪುರ
- ಬೆಂಗಳೂರು
- ರಿಷಿಕೇಶ
- ಮುಂಬೈ
- ಹೈದರಾಬಾದ್
- ಚೆನ್ನೈ
- ಪುಣೆ
- ಮನಾಲಿ
- ಗುರುಗ್ರಾಮ
ಭಾರತೀಯ ಪ್ರಯಾಣಿಕರು ಹೆಚ್ಚು ಆಯ್ಕೆ ಮಾಡಿದ ವಿದೇಶಿ ಪ್ರವಾಸ ತಾಣಗಳು.
- ದುಬೈ
- ಬ್ಯಾಂಕಾಂಕ್
- ಲಂಡನ್
- ಸಿಂಗಾಪುರ್
- ವುಂಗ್ ಟೌ (ವಿಯೆಟ್ನಾಂ)
- ಕೌಲಲಾಂಪುರ್ (ಮಲೇಷಿಯಾ)
- ಹೋ ಚಿ ಮಿನ್ಹ್ ಸಿಟಿ (ವಿಯೆಟ್ನಾಂ)
- ಫ್ಯಾರಿಸ್
- ಹನೋಯಿ (ವಿಯೆಟ್ನಾಂ)
ಇದನ್ನೂ ಓದಿ: Global Temperature: ಹೆಚ್ತಿದೆ ಜಾಗತಿಕ ಉಷ್ಣಾಂಶ; ನಿರ್ವಹಣೆಗೆ ಬೇಕಿದೆ ತುರ್ತು ಕ್ರಮ