ಮದುವೆ ಎಂದರೆ ಅದೊಂದು ಸಂಭ್ರಮ. ಮದುವೆ ಮನೆಯಲ್ಲಿ ವಧು-ವರ ಆಕರ್ಷಣೆಯ ಕೇಂದ್ರ ಬಿಂದು. ಇದೇ ಕಾರಣದಿಂದ ಉಳಿದ ದಿನಗಳಿಗಿಂತ ಈ ದಿನ ಅವರು ಹೆಚ್ಚು ಸುಂದರವಾಗಿ ಕಂಗೊಳಿಸಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಮದುವೆಗೆ ವಾರ, ತಿಂಗಳಿಗೂ ಮೊದಲೇ ತಮ್ಮ ತ್ವಚೆ ಮತ್ತು ಕೂದಲಿನ ಕಾಳಜಿಗೆ ಮುಂದಾಗುತ್ತಾರೆ. ಚರ್ಮದ ಹೊಳಪಿಗೆ ಮೇಕಪ್ ಅವಶ್ಯಕವಾದರೂ ಆಂತರಿಕವಾಗಿ ಮಿನುಗಲು ಆಹಾರ ಶೈಲಿ ಹಾಗೂ ಜೀವನಶೈಲಿ ಸೇರಿದಂತೆ ಹಲವು ಅಂಶಗಳೇ ಕಾರಣವಾಗುತ್ತವೆ. ಅಂತಹ ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದರೆ ಈ ಸರಳ ಸಲಹೆಗಳನ್ನು ಪಾಲಿಸಿ.
![ನಿದ್ದೆಯಲ್ಲಿ ರಾಜಿ ಬೇಡ](https://etvbharatimages.akamaized.net/etvbharat/prod-images/sleep2_0501newsroom_1672918939_134.jpg)
ನಿದ್ದೆಯಲ್ಲಿ ರಾಜಿ ಬೇಡ: ಮದುವೆ ಹತ್ತಿರ ಬರುತ್ತಿದ್ದಂತೆ ಅದರ ಉತ್ಸಾಹ, ಆತಂಕಗಳಿಂದ ನಿದ್ದೆಯ ಅವಧಿ ಕಡಿತಗೊಳ್ಳುತ್ತದೆ. ಆದರೆ, ಇಂತಹ ತಪ್ಪು ಮಾಡಬಾರದು. ಸೌಂದರ್ಯದ ರಹಸ್ಯ ಅಡಗಿರುವುದೇ ನಿದ್ದೆಯಲ್ಲಿ ಎಂಬುದನ್ನು ಮರೆಯದೇ, ಪ್ರತಿ ರಾತ್ರಿ 8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಬೇಕು. ಇದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.
![ತ್ವಚೆಯ ಕಾಳಜಿ](https://etvbharatimages.akamaized.net/etvbharat/prod-images/bigskinroutine_2911newsroom_1669702079_638.jpg)
ಫೈಬರ್ ಡಯಟ್ಗೆ ಗಮನ ನೀಡಿ: ತಿನ್ನುವ ಆಹಾರಗಳು ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತವೆ. ಇದೇ ಕಾರಣಕ್ಕೆ ಆಹಾರ, ಡಯಟ್ ವಿಷಯದಲ್ಲಿ ಗಮನ ಇರಬೇಕು. ಡಯಟ್ ಬಗ್ಗೆ ಗಣನೀಯವಾಗಿ ಬದಲಾವಣೆ ಮಾಡದಿದ್ದರೂ ಅದರಲ್ಲಿ ಫೈಬರ್ ಅಂಶ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಇದನ್ನು ಮದುವೆಗೆ ತಿಂಗಳು ಇರುವ ಮುನ್ನ ಆರಂಭಿಸಿದರೂ ಸಾಕು. ಹಣ್ಣು ಮತ್ತು ತರಕಾರಿ ಸೇವನೆಗೆ ಆದ್ಯತೆ ನೀಡಿ. ಇದು ಹೆಚ್ಚಿನ ಫೈಬರ್ ಅಂಶ ಹೊಂದಿರುತ್ತದೆ.
![ಫೈಬರ್ ಡಯಟ್](https://etvbharatimages.akamaized.net/etvbharat/prod-images/16821573_vegan-diet.jpg)
ಫೇಶಿಯಲ್ ಕೆಲವರಿಗೆ ಹಾನಿಕಾರಕ: ಮದುವೆ ದಿನ ಹತ್ತಿರ ಬರುತ್ತಿದ್ದಂತೆ ವಧು-ವರ ಅನೇಕ ದುಬಾರಿ ಫೇಶಿಯಲ್ಗಳ ಮೊರೆ ಹೋಗುತ್ತಾರೆ. ಈ ಚಿಕಿತ್ಸೆಗಳು ಎಲ್ಲರಿಗೂ ಸರಿಹೊಂದದು. ಕೆಲವೊಮ್ಮೆ ಇದು ನಿಮ್ಮ ತ್ವಚೆಗೆ ಹಾನಿಕಾರಕವೂ ಆಗಬಹುದು. ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮೋಯಶ್ಚರೈಸರ್ಗೆ ಅಂಟಿಕೊಳ್ಳಬೇಡಿ. ಒಂದು ವೇಳೆ ನೀವು ಫೇಶಿಯಲ್ ಚಿಕಿತ್ಸೆ ಪಡೆಯಬೇಕು ಎಂದರೆ, ಅದಕ್ಕೆ ಡರ್ಮಟಾಲಜಿ ವೈದ್ಯರ ಸಲಹೆ ಪಡೆಯಿರಿ.
![ಮಾಯಶ್ಚರೈಸರ್ ಕಾಪಾಡಿಕೊಳ್ಳಿ](https://etvbharatimages.akamaized.net/etvbharat/prod-images/5508930f4522bdaa0069caea264a3a75_1009a_1662792432_300.jpg)
ಮಾಯಶ್ಚರೈಸರ್ ಕಾಪಾಡಿಕೊಳ್ಳಿ: ತ್ವಚೆಯಲ್ಲಿ ತೇವಾಂಶ ಕಾಪಾಡಲು ಮಾಯಶ್ಚರೈಸರ್ ಅಗತ್ಯ. ಪ್ರತಿನಿತ್ಯ ಚರ್ಮದ ಮಾಯಶ್ಚರೈಸರ್ ಅನ್ನು ಆರೋಗ್ಯ ಮತ್ತು ನೈಸರ್ಗಿಕವಾಗಿ ಕಾಪಾಡಿಕೊಳ್ಳುವುದು ಅವಶ್ಯಕ.
ಒತ್ತಡದಿಂದ ದೂರವಿರಿ: ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂದರೆ ಒತ್ತಡದಿಂದ ದೂರವಿರುವುದು. ಮದುವೆ ಸಮಯ ಹತ್ತಿರ ಬರುತ್ತಿದ್ದಂತೆ ಸಿದ್ದತೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಒತ್ತಡ ಹೆಚ್ಚಾಗುತ್ತದೆ. ಇದು ಮಾನಸಿಕ, ದೈಹಿಕ ಮತ್ತು ಆಂತರಿಕ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಒತ್ತಡದಿಂದ ದೂರ ಇರಬೇಕು. ಒಂದು ವೇಳೆ ಈ ರೀತಿ ಒತ್ತಡ ಹೆಚ್ಚಾದರೆ ಸ್ಪಾ, ಮಸಾಜ್ ಸಹಾಯ ಪಡೆಯಬಹುದು. ಇಲ್ಲವೇ ಪಾರ್ಕ್ನಲ್ಲಿ ಒಂದು ನಡಿಗೆ ಕೂಡ ಹೆಚ್ಚು ಪರಿಣಾಮಕಾರಿ.
ಇದನ್ನೂ ಓದಿ: ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರಲು ಈ ಐದು ಚಹಾ ಸೇವನೆ ಉತ್ತಮ ಪರಿಹಾರ!