ನವದೆಹಲಿ: ಕೋವಿಡ್ ಸಮಯದಲ್ಲಿ ಆನ್ಲೈನ್ ತರಗತಿಗಳ ಮೂಲಕ ಶಿಕ್ಷಣ ಪಡೆದು 'ರಿಯಾಯಿತಿ'ಗಳ ಆಧಾರದ ಮೇಲೆ ತೇರ್ಗಡೆಯಾಗಿ ಅಥವಾ ಆನ್ಲೈನ್ ಮೂಲಕ ಪರೀಕ್ಷೆಗಳನ್ನು ಎದುರಿಸಿ ಪಾಸಾದ ವಿದ್ಯಾರ್ಥಿಗಳು ಈಗ ಪರೀಕ್ಷಾ ಕೊಠಡಿಯಲ್ಲಿಯೇ ಕೋವಿಡ್ ಕಾಣಿಸಿಕೊಳ್ಳುವುದಕ್ಕಿಂತ ಮೊದಲು ಯಾವ ರೀತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದರೋ, ಅದೇ ರೀತಿ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗುತ್ತಿದ್ದಾರೆ.
ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಒತ್ತಡ ಎದುರಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಮೇಲಿನ ಈ ರೀತಿಯ ಒತ್ತಡ ವಿದ್ಯಾರ್ಥಿಗಳ ಫಲಿತಾಂಶ, ಕುಟುಂಬ, ಶಾಲಾ ಕಾಲೇಜುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಶಿಕ್ಷಕರು ಮತ್ತು ಪೋಷಕರು ಎಲ್ಲರೂ ಒಟ್ಟಾಗುವ ಮೂಲಕ ವಿದ್ಯಾರ್ಥಿಗಳ ಮೇಲೆ ಬರುವ ಪರೀಕ್ಷೆಯ ಒತ್ತಡವನ್ನು ನಿವಾರಿಸಬಹುದು. ಈ ಬಗ್ಗೆ ಲೇಖನ ಸಾಮಗ್ರಿಗಳ ತಯಾರಿಕೆ ಮಾಡುವ ಬಿಐಸಿ ಸೆಲ್ಲೋ ಕಂಪನಿಯ ಸೀನಿಯರ್ ಯೂಸರ್ ರಿಸರ್ಚ್ ಮ್ಯಾನೇಜರ್ ಇರಿನಿ ಪೆಟ್ರಾಟೌ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
1. ಸ್ವಂತ ಸ್ಟಡಿ ಪ್ಲ್ಯಾನ್ ರಚಿಸಿ: ಪರೀಕ್ಷೆಯ ತಯಾರಿ ಸಮಯವನ್ನು ನಿರ್ವಹಿಸಲು ಸುಲಭವಾಗುವಂತೆ ನಿಮ್ಮದೇ ಆದ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ನಿಮ್ಮ ಅಧ್ಯಯನ ಮತ್ತು ಅಭ್ಯಾಸಗಳಿಗೆ ಸರಿಹೊಂದುವ ರೀತಿಯಲ್ಲಿ ವೇಳಾಪಟ್ಟಿ ರಚಿಸಿಕೊಳ್ಳಿ. ನಿಮ್ಮದೇ ವೇಳಾಪಟ್ಟಿಯನ್ನು ರಚಿಸುವಾಗ ಬೇರೆಯವರಿಂದ ಆಗದ ಕೆಲಸ ನಿಮ್ಮಿಂದ ಆಗಬಹುದು ಎಂಬ ವಿಚಾರ ಗೊತ್ತಾಗುವ ಸಾಧ್ಯತೆ ಇರುತ್ತದೆ.
2. ಕಲಿಯಲು ಬರೆಯಿರಿ: ಯಾವುದಾರೊಂದು ವಿಚಾರವನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳಲು 'ಕಲಿಯಲು ಬರೆಯಿರಿ' ವಿಧಾನ ಅತ್ಯಂತ ಸೂಕ್ತ. ಕೋವಿಡ್ ವೇಳೆ ಆನ್ಲೈನ್ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ಈಗ ಆಫ್ಲೈನ್ ಕಡೆಗೆ ಬಂದಿದ್ದು, ಪೆನ್ ಮತ್ತು ಪೇಪರ್ ಬಳಸುವುದು ಅನಿವಾರ್ಯ. ಅಧ್ಯಯನ ವೇಳೆಯೂ ಪೆನ್ ಮತ್ತು ಪೇಪರ್ ಬಳಸುವ ಕಾರಣದಿಂದ ನೆನಪಿಡಲು ಸಹಕಾರಿಯಾಗುತ್ತದೆ.
3. ಎಲ್ಲಾ ಸಮಯದಲ್ಲೂ ಆರೋಗ್ಯವಾಗಿರಿ: ಆರೋಗ್ಯಕರ ಮತ್ತು ಆ್ಯಕ್ಟಿವ್ ಆಗಿರುವುದು ಒತ್ತಡ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಕಾರ್ಯ ಮತ್ತು ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಅನಾರೋಗ್ಯಕರ ದೇಹವು ಏಕಾಗ್ರತೆಯ ಭಂಗ ತರುತ್ತದೆ. ವಿಶೇಷವಾಗಿ ಪರೀಕ್ಷೆಯ ಅವಧಿಯಲ್ಲಿ, ಸಾಕಷ್ಟು ನೀರು ಕುಡಿಯಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ವ್ಯಾಯಾಮದಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು.
4. ಸಾಕಷ್ಟು ನಿದ್ರೆ ಮಾಡಿ: ನಿದ್ರಾಹೀನತೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ದುಷ್ಪರಿಣಾಮ ಉಂಟುಮಾಡುತ್ತದೆ. ನಿದ್ರಾಹೀನತೆ ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮೆದುಳು ಮತ್ತು ದೇಹವು ಸಾಕಷ್ಟು ವಿಶ್ರಾಂತಿ ಪಡೆಯಲು ಕನಿಷ್ಠ ಎಂಟರಿಂದ ಒಂಬತ್ತು ಗಂಟೆಗಳ ನಿದ್ರೆಯ ಅಗತ್ಯವಿದೆ. ಮಲಗುವ ಮೊಬೈಲ್ ಅಥವಾ ಗ್ಯಾಜೆಟ್ ಬಳಕೆ ಮಾಡುವುದು ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಮತ್ತು ಏಳಲು ದೇಹವನ್ನು ತಯಾರು ಮಾಡಿ, ಈ ಮೂಲಕ ಮೆದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ.
5. ಸಕಾರಾತ್ಮಕ ಮನಸ್ಥಿತಿ ಅಳವಡಿಸಿಕೊಳ್ಳಿ: ಮಾನಸಿಕ ಆರೋಗ್ಯ ನಾವು ಮಾಡುವ ಪ್ರತಿಯೊಂದು ಕೆಲಸದ ಮೇಲೆ ಪರಿಣಾಮವನ್ನು ಬೀರುತ್ತದೆ. ಪರೀಕ್ಷೆಯ ಅವಧಿಯಲ್ಲಿ ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಹೆಚ್ಚಿನ ಮಟ್ಟದ ಏಕಾಗ್ರತೆಯನ್ನು ಸೃಷ್ಟಿಸುತ್ತದೆ. ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಸವಾಲಿನ ಸಂದರ್ಭಗಳನ್ನು ನಿಭಾಯಿಸಲು ಮಾನಸಿಕ ಆರೋಗ್ಯ ಸಹಕಾರ ನೀಡುತ್ತದೆ.
ಇದನ್ನೂ ಓದಿ: ಕೋವಿಡ್ ಸೋಂಕಿತ ಮಕ್ಕಳು, ಹದಿಹರೆಯದವರಿಗೆ ದೀರ್ಘಕಾಲದ ಸಮಸ್ಯೆ ಕಾಡುತ್ತಾ? ಅಧ್ಯಯನ ಹೇಳಿದಿಷ್ಟು..