ಆಹಾರ ಸೇವನೆ ಮತ್ತು ತೂಕ ನಿರ್ವಹಣೆಯ ಪ್ರಯತ್ನದಲ್ಲಿ ತಟ್ಟೆಯ ಗಾತ್ರವೂ ಕೂಡಾ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಡಾ.ರೋಹಿಣಿ ತಿಳಿಸಿದ್ದಾರೆ. ವಿವರಣೆ ನೀಡಿರುವ ಅವರು, ಹೇಗೆ ಸಣ್ಣ ಮತ್ತು ದೊಡ್ಡ ಗಾತ್ರದ ಪ್ಲೇಟ್ಗಳು ಒಬ್ಬ ವ್ಯಕ್ತಿ ತೂಕ ನಷ್ಟದಲ್ಲಿ ಪಾತ್ರವಹಿಸುತ್ತದೆ ಎಂದು ತಿಳಿಸಿದ್ದಾರೆ.
ಆಹಾರದ ಗಾತ್ರ: ಸಣ್ಣ ಪ್ಲೇಟ್ಗಳನ್ನು ಬಳಕೆ ಮಾಡಿದಾಗ ಆ ಗಾತ್ರಕ್ಕೆ ಹೊಂದುವಂತೆ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಹಾಕಿಕೊಳ್ಳಬಹುದು. ಇದು ನೋಡುವಾಗ ತಟ್ಟೆ ತುಂಬಾ ಆಹಾರವಿದೆ ಎಂಬ ಭಾವನೆ ಮೂಡಿಸುವ ಜೊತೆಗೆ, ಹೊಟ್ಟೆ ತುಂಬ ಆಹಾರ ಸೇವನೆ ಮಾಡಿದೆ ಎಂಬ ತೃಪ್ತಿಯನ್ನೂ ನೀಡುತ್ತದೆ.
ಗಾತ್ರ ನಿಯಂತ್ರಣ: ಸಣ್ಣ ಗಾತ್ರದ ತಟ್ಟೆಯಲ್ಲಿ ಅದರ ತುಂಬಾ ಆಹಾರ ಬಡಿಸಿದಾಗ, ಅದು ತಟ್ಟೆ ತುಂಬಾ ಆಹಾರ ಇದೆ ಎಂಬ ಭ್ರಮೆ ಮೂಡಿಸುತ್ತದೆ. ಇದರಿಂದ ಅತಿಯಾಗಿ ಸೇವನೆ ಮಾಡುವುದು ಕಡಿಮೆಯಾಗುತ್ತದೆ. ಸಣ್ಣ ಗಾತ್ರದಲ್ಲಿ ಹೆಚ್ಚಿನ ಊಟ ಮಾಡಿದೆ ಎಂಬ ಭಾವನೆ ಮೆದುಳಿಗೆ ರವಾನೆಯಾಗುವುದರೊಂದಿಗೆ ತೂಕ ಕಳೆದುಕೊಳ್ಳುವಲ್ಲಿ ಇದು ಸಹಾಯ ಮಾಡುತ್ತದೆ.
ಗಮನವಿಟ್ಟು ಆಹಾರ ಸೇವಿಸಿ: ಆಹಾರವನ್ನು ಸೇವಿಸುವಾಗ ಸಂಪೂರ್ಣ ಗಮನ ಅದರೆಡೆಗೆ ಇದ್ದರೆ ತಿಂದ ತೃಪ್ತಿಭಾವ ಬರಲಿದೆ. ಮೊಬೈಲ್, ಟಿವಿ ನೋಡುತ್ತಾ ಆಹಾರ ಸೇವಿಸುವಾಗ ಎಷ್ಟು ಪ್ರಮಾಣದ ಆಹಾರ ಸೇವನೆ ಮಾಡಿದೆವು ಎಂಬ ಅರಿವು ಇರುವುದಿಲ್ಲ. ಸಣ್ಣ ಗಾತ್ರದ ಪ್ಲೇಟ್ನಲ್ಲಿ ಆಹಾರ ಚೆಲ್ಲದಂತೆ ಸೇವನೆ ಮಾಡುವ ಕಾರಣಕ್ಕೆ ಅದರ ರುಚಿ, ಸ್ವಾದವನ್ನು ಅನುಭವಿಸಿ ತಿನ್ನಬಹುದು. ಇದರಿಂದ ಕೊಂಚವೇ ಆಹಾರ ಸೇವಿಸಿದರೂ ಅದು ಹೆಚ್ಚು ತಿಂದ ಅನುಭವ ತರಿಸುತ್ತದೆ.
ಕ್ಯಾಲೋರಿ ಕಡಿತ: ಸಣ್ಣ ಪ್ಲೇಟ್ನಲ್ಲಿ ಆಹಾರ ಸೇವನೆ ಮಾಡುವುದರಿಂದ ಕ್ಯಾಲೋರಿ ಇಳಿಕೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಕಡಿಮೆ ಗಾತ್ರದ ಆಹಾರ ಸೇವನೆಯಿಂದ ಕ್ಯಾಲೋರಿ ಕಡಿತವಾಗುತ್ತಿದೆ. ಇದರಿಂದ ತೂಕ ನಿರ್ವಹಣೆಗೆ ಸಹಾಯವಾಗಲಿದೆ. ಅದೇ ದೊಡ್ಡ ಪ್ಲೇಟ್ಗಳ ಆಹಾರದಿಂದ ಅತಿಯಾದ ಆಹಾರ ಜೊತೆಗೆ ಕ್ಯಾಲೋರಿ ಸೇವನೆ ಹೆಚ್ಚಬಹುದು.
ಮಾನಸಿಕ ತೃಪ್ತಿ: ಸಣ್ಣ ಪ್ಲೇಟ್ನ ಆಹಾರವು ಭ್ರಮೆಯನ್ನು ಮೂಡಿಸುವ ಜೊತೆಗೆ ಆಹಾರ ಸ್ವಾದ ಅನುಭೂತಿ ನೀಡುತ್ತದೆ. ಇದು ಪೂರ್ಣ ತಟ್ಟೆ ಆಹಾರವನ್ನು ಮುಗಿಸಿದ ತೃಪ್ತಿ ಮತ್ತು ಸಂತೋಷವನ್ನು ಕೊಡುತ್ತದೆ.
ಏನಿದು ಸುಸ್ಥಿರ ಆಹಾರ ಪದ್ಧತಿ?: ನಿಯಮಿತವಾಗಿ ಸಣ್ಣ ಪ್ಲೇಟ್ನಲ್ಲಿ ಆಹಾರ ಸೇವನೆ ಮಾಡುವುದರಿಂದ ನಿಮ್ಮ ಮೆದುಳು ಕೂಡ ಅದೇ ಗಾತ್ರದ ಆಹಾರ ಸೇವನೆಗೆ ಹೊಂದಿಕೊಳ್ಳುತ್ತದೆ. ಇದು ಆಹಾರ ಸೇವನೆ, ಆರೋಗ್ಯಯುತ ತೂಕವನ್ನು ಹೊಂದಲು ಉತ್ತೇಜಿಸುತ್ತದೆ. ಇದು ಸುಸ್ಥಿರ ಮತ್ತು ಆರೋಗ್ಯಯುತ ತಿನ್ನುವ ಅಭ್ಯಾಸಕ್ಕೆ ಕಾರಣವಾಗುತ್ತದೆ.
ಸಾಮಾಜಿಕ ಪ್ರಭಾವ: ಸಣ್ಣ ಗಾತ್ರದ ತಟ್ಟೆಗಳ ಬಳಕೆ ನಿಮ್ಮ ಸುತ್ತಲಿನ ಇತರರ ಮೇಲೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸೋಷಿಯಲ್ ಗ್ಯಾದರಿಂಗ್ ನಂತಹ ಕಾರ್ಯಕ್ರಮಗಳಲ್ಲಿ ಸಣ್ಣ ತಟ್ಟೆ ಬಳಕೆ ಮಾಡಿದಾಗ ಆಹಾರ ನಿಯಂತ್ರವನ್ನು ಮಾಡಿ ಆರೋಗ್ಯಕರ ಆಹಾರ ಪದ್ಧತಿಗೆ ಉತ್ತೇಜಿಸುತ್ತದೆ.
ಜೀರ್ಣಕ್ರಿಯೆ, ತೃಪ್ತಿ ಭಾವ: ಸಣ್ಣ ಗಾತ್ರದ ತಟ್ಟೆಗಳಿ ಜೀರ್ಣಕ್ರಿಯೆ ಸೇರಿದಂತೆ ಒಟ್ಟಾರೆ ಊಟದ ತೃಪ್ತಿ ಭಾವ ಉಂಟು ಮಾಡುತ್ತದೆ. ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದರಿಂದ ಅದು ಬೇಗ ಜೀರ್ಣವಾಗುತ್ತದೆ. ಇದು ಆರಾಮದಾಯಕವಾಗಿದ್ದು, ಅಜೀರ್ಣ, ಕಿರಿಕಿರಿ ತಪ್ಪುತ್ತದೆ.
ಸಣ್ಣ ಗಾತ್ರದ ತಟ್ಟೆಗಳು ತೂಕ ನಿರ್ವಹಣೆಗೆ ಸಹಾಯ ಮಾಡಬಹುದು. ಅದಕ್ಕಿಂತ ಅಗತ್ಯವಾಗಿ ಪೋಷಕಾಂಶಯುಕ್ತ ಆಹಾರ, ದೈನಂದಿನ ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಜೀವನ ಶೈಲಿ ಸೇರಿದಂತೆ ಒಟ್ಟಾರೆ ಗುಣಮಟ್ಟದ ಡಯಟ್ ಮಾತ್ರ ನಿಮ್ಮ ಸುಸ್ಥಿರ ತೂಕ ನಿರ್ವಹಣೆ ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ.
ಇದನ್ನೂ ಓದಿ: ಇಷ್ಟದ ಆಹಾರದ ಚಿತ್ರವನ್ನು ಪದೇ ಪದೇ ನೋಡುವುದೇಕೆ? ವರದಿ ಹೀಗನ್ನುತ್ತದೆ!