ಮಳೆಗಾಲದಿಂದ ಚಳಿಗಾಲಕ್ಕೆ ಋತು ಜಾರುತ್ತಿದ್ದು, ಪ್ರಕೃತಿಯಲ್ಲಿ ಬದಲಾವಣೆಯಾಗುತ್ತಿದೆ. ಚಳಿಗಾಲಕ್ಕೆ ಚರ್ಮ, ಕೂದಲು, ಮುಖ, ಆರೋಗ್ಯ ಎಲ್ಲದರ ಬಗ್ಗೆ ನಾವು ಗಮನಹರಿಸಬೇಕಿದೆ. ಚಳಿಗಾಲದ ತಣ್ಣನೆಯ ಗಾಳಿ ಬೆಚ್ಚಗೆ ಹೊದ್ದುಕೊಳ್ಳಲು ಹಾಯಾಗಿದ್ದರೂ, ನಮ್ಮ ಚರ್ಮದ ಮೇಲೆ ಬೇರೆ ರೀತಿಯಲ್ಲೇ ಪರಿಣಾಮ ಬೀರುತ್ತದೆ. ತಣ್ಣನೆಯ ಗಾಳಿ ಚರ್ಮವನ್ನು ಒಣಗಿಸುತ್ತದೆ. ದಿನವಿಡೀ ಕಳೆದು ಸಂಜೆಯಾಗುವ ಹೊತ್ತಿಗೆ, ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚಿದರೂ, ಚರ್ಮ ಶುಷ್ಕತೆಯಿಂದ ಕೂಡಿರುತ್ತದೆ.
ಚರ್ಮ ಜೀವಂತಿಕೆಯಿಂದ ಕೂಡಿರಲು ಈ ಚಳಿಗಾಲದಲ್ಲಿ ಏನು ಮಾಡಬಹುದು? ಚಳಿಗಾಲದಲ್ಲಿ ನಿಮ್ಮ ಮುಖ ಹಾಗೂ ದೇಹದ ಚರ್ಮ ಮೃದುವಾಗಿ ಹಾಗೂ ಕಾಂತಿಯುತವಾಗಿ ಕಾಣಿಸಲು ವಾಟರ್ ಲಿಲಿ (ನೈದಿಲೆ) ಹೂವುಗಳು ಸಹಾಯ ಮಾಡುತ್ತವೆ.
ಜೇನುತುಪ್ಪ ಹಾಗೂ ಅರಿಶಿಣದ ಜೊತೆ ವಾಟರ್ ಲಿಲಿ: ಪೌಷ್ಠಿಕಾಂಶ ಮೌಲ್ಯವನ್ನು ಹೊಂದಿರುವ ವಾಟರ್ ಲಿಲಿ ಹೂವಿನ ಹತ್ತು ದಳಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪುಡಿ ಮಾಡಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ, ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಚರ್ಮ ಮೃದುವಾಗುತ್ತದೆ. ಒಂದು ವೇಳೆ ತಾಜಾ ಹೂವುಗಳು ದೊರೆಯದೇ ಇದ್ದರೆ ಮಾರುಕಟ್ಟೆಯಲ್ಲಿ ವಾಟರ್ ಲಿಲಿ ಹೂವುಗಳ ಪುಡಿ ಲಭ್ಯವಿದೆ. ಅವುಗಳನ್ನು ಬಳಸಬಹುದು. ಇದೇ ಪುಡಿಯನ್ನು ಎರಡು ಚಮಚ ತೆಗೆದುಕೊಂಡು ಅದಕ್ಕೆ ಕಾಲು ಚಮಚ ಅರಿಶಿನ ಹಾಗೂ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ಅದನ್ನು ತೊಳೆಯಿರಿ. ಇದರಿಂದ ಚರ್ಮದ ಟೋನ್ ಸುಧಾರಿಸುತ್ತದೆ. ಮಾತ್ರವಲ್ಲದೇ ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ನಿವಾರಣೆಯಾಗುತ್ತದೆ.
ಅಲೋವೆರಾ ಹಾಗೂ ಮೊಸರಿನೊಂದಿಗೆ ವಾಟರ್ ಲಿಲಿ: ಐದು ವಾಟರ್ ಲಿಲಿ ಹೂವುಗಳನ್ನು ತೆಗದುಕೊಂದು ನುಣ್ಣಗೆ ರುಬ್ಬಿಕೊಳ್ಳಿ. ಒಂದು ಚಮಚ ಅಲೋವೆರಾ ತಿರುಳು ಮತ್ತು ಸ್ವಲ್ಪ ಮೊಸರನ್ನು ರುಬ್ಬಿಟ್ಟುಕೊಂಡು ಪೇಸ್ಟ್ಗೆ ಸೇರಿಸಿಕೊಳ್ಳಿ, ಈ ಮಿಶ್ರಣವನ್ನು ನಯವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಮುಖದಲ್ಲೇ ಅದನ್ನು ಒಣಗಲು ಬಿಡಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಚರ್ಮವನ್ನು ಶೀತಗಾಳಿಯಿಂದ ರಕ್ಷಿಸುತ್ತದೆ. ಚರ್ಮ ಒಣಗುವುದನ್ನು ತಪ್ಪಿಸಿ, ಮೃದುವಾಗಿ ಕಾಂತಿಯುತವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ. ಈ ಮಿಶ್ರಣ ಚರ್ಮಕ್ಕೆ ತೇವಾಂಶವನ್ನು ಒದಗಿಸುವ ಮೂಲಕ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಶ್ರೀಗಂಧದ ಜೊತೆ ವಾಟರ್ ಲಿಲಿ: ಒಂದು ಚಮಚ ನೈದಿಲೆ ಹೂವಿನ ಪೇಸ್ಟ್ ಮತ್ತು ಒಂದು ಚಮಚ ಶ್ರೀಗಂಧದ ಪುಡಿಯನ್ನು ಬೆರೆಸಿ ಮುಖಕ್ಕೆ ಲೇಪಿಸಬೇಕು. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ಇದು ತ್ವಚೆಗೆ ಹೊಸ ಹೊಳಪು ನೀಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ತುಟಿ ಬಿರುಕು ಸಮಸ್ಯೆ: ಈ ತಪ್ಪು ಮಾಡಲೇಬೇಡಿ