ಹೈದರಾಬಾದ್; ಎಡಿತ್ ಕೋವನ್ ವಿಶ್ವವಿದ್ಯಾನಿಲಯವು ನಡೆಸಿದ ಹೊಸ ಅಧ್ಯಯನದ ಪ್ರಕಾರ, ಕರುಳಿನ ಅಸ್ವಸ್ಥತೆ ಹೊಂದಿರುವ ಜನರಲ್ಲಿ ಅಲ್ಜೈಮರ್ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ತಿಳಿದುಬಂದಿದೆ. ಅಧ್ಯಯನವು ಎರಡರ ನಡುವಿನ ಸಂಬಂಧವನ್ನು ದೃಢಪಡಿಸಿದೆ ಮತ್ತು ಇದರಿಂದ ರೋಗವನ್ನು ಮುಂಚಿತವಾಗಿಯೇ ಪತ್ತೆ ಮಾಡಲು ಸಾಧ್ಯವಾಗಲಿದೆ.
ಈ ಮೂಲಕ ಹೊಸ ಸಂಭಾವ್ಯ ಚಿಕಿತ್ಸೆಗಳನ್ನು ಕಂಡು ಹಿಡಿಯಲು ಸಹಾಯಕವಾಗಬಹುದು. ಯಾವುದೇ ಸೂಕ್ತ ಚಿಕಿತ್ಸೆ ಇಲ್ಲದ ಅಲ್ಜೈಮರ್ ಕಾಯಿಲೆಯು ಸ್ಮರಣ ಶಕ್ತಿ ಮತ್ತು ಆಲೋಚನಾ ಶಕ್ತಿಯನ್ನು ಹಾಳು ಮಾಡುತ್ತದೆ ಹಾಗೂ ಇದೊಂದು ಬುದ್ಧಿಮಾಂದ್ಯತೆಯ ಸ್ವರೂಪವಾಗಿದೆ. ಅಲ್ಜೈಮರ್ ತಡೆಗಟ್ಟಬಹುದಾದ ಯಾವುದೇ ಔಷಧಿ ಈವರೆಗೂ ತಿಳಿದಿಲ್ಲ ಹಾಗೂ 82 ಮಿಲಿಯನ್ ಜನತೆ ಇದರಿಂದ ಬಳಲುವ ಸಾಧ್ಯತೆ ಇದ್ದು, ಇದರಿಂದ 2 ಟ್ರಿಲಿಯನ್ ಡಾಲರ್ನಷ್ಟು ಹಣ ವ್ಯಯವಾಗಬಹುದು.
ಹಿಂದಿನ ಸಂಶೋಧನಾ ಅಧ್ಯಯನಗಳು ಅಲ್ಜೈಮರ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ನಡುವಿನ ಸಂಬಂಧವನ್ನು ಸೂಚಿಸಿದ್ದವು. ಆದರೆ ಇಲ್ಲಿಯವರೆಗೆ ಈ ಮಾಹಿತಿಯು ದೃಢಪಟ್ಟಿರಲಿಲ್ಲ. ಅಲ್ಜೈಮರ್ ಮತ್ತು ಕರುಳು ಬೇನೆಗಳ ಮಧ್ಯೆ ಆನುವಂಶಿಕ ಸಂಬಂಧವಿರುವುದನ್ನು ಕೋವನ್ ವಿವಿಯ ಸಂಶೋಧನೆಗಳು ದೃಢಪಡಿಸಿವೆ.
ಸಂಶೋಧನೆಯಲ್ಲಿ ಅಲ್ಜೈಮರ್ ಮತ್ತು ಕರುಳು ಬೇನೆಯ ಸುಮಾರು 4 ಲಕ್ಷ ಜನರ ಆನುವಂಶಿಕ ಮಾಹಿತಿಯನ್ನು ಅಧ್ಯಯನ ಮಾಡಲಾಗಿದೆ. ಅಲ್ಜೈಮರ್ ಮತ್ತು ಕರುಳು ಬೇನೆಗಳ ಮಧ್ಯೆ ಆನುವಂಶಿಕ ಸಂಬಂಧವಿರುವುದನ್ನು ದೃಢಪಡಿಸುವ ಪ್ರಥಮ ಸಮಗ್ರ ಮೌಲ್ಯಮಾಪನ ಇದಾಗಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ. ಎಮ್ಮಾನುಯೆಲ್ ಅಡೆಯುಯಿ ಹೇಳಿದರು.
ಅಲ್ಜೈಮರ್ ಮತ್ತು ಕರುಳಿನ ಅಸ್ವಸ್ಥತೆ ಹೊಂದಿರುವ ಜನರು ಒಂದು ವಿಶಿಷ್ಟ ಜೀನ್ಗಳನ್ನು ಹೊಂದಿರುತ್ತಾರೆ ಹಾಗೂ ಇದೇ ಕಾರಣಕ್ಕಾಗಿ ಈ ಸಂಶೋಧನೆ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಈ ಅಧ್ಯಯನವು ಕರುಳಿನ ಅಸ್ವಸ್ಥತೆಗಳಿಂದ ಅಲ್ಜೈಮರ್ ಉಂಟಾಗುತ್ತದೆ ಎಂದಾಗಲೀ ಅಥವಾ ಅದರ ವಿರುದ್ಧ ದಿಕ್ಕಿನಲ್ಲಾಗಲಿ ಯಾವುದನ್ನೂ ತೀರ್ಮಾನಿಸಿಲ್ಲ. ಆದರೂ ಈಗ ಕಂಡು ಬಂದಿರುವ ಫಲಿತಾಂಶಗಳು ಅಪಾರ ಮೌಲ್ಯಯುತವಾಗಿವೆ ಎನ್ನುತ್ತಾರೆ ಸೆಂಟರ್ ಫಾರ್ ಪ್ರಿಸಿಶನ್ ಹೆಲ್ತ್ ನಿರ್ದೇಶಕ ಮತ್ತು ಅಧ್ಯಯನ ಮೇಲ್ವಿಚಾರಕ ಪ್ರೊಫೆಸರ್ ಸೈಮನ್ ಲಾಸ್.
ಈ ಸಂಶೋಧನೆಗಳು ಮೆದುಳಿನ ಅರಿವಿನ ಮತ್ತು ಭಾವನಾತ್ಮಕ ಕೇಂದ್ರಗಳ ನಡುವಿನ ದ್ವಿಮುಖ ಲಿಂಕ್ ಆಗಿರುವ 'ಕರುಳು-ಮೆದುಳು' ಅಕ್ಷದ ಪರಿಕಲ್ಪನೆಯನ್ನು ಬೆಂಬಲಿಸಲು ಮತ್ತು ಕರುಳಿನ ಕಾರ್ಯನಿರ್ವಹಣೆಯ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತವೆ ಎಂದು ಲಾಸ್ ಹೇಳಿದರು.
ಕೊಲೆಸ್ಟರಾಲ್ ಪಾತ್ರವೇನು? ಒಂದೇ ರೀತಿಯ ವಂಶವಾಹಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದಾಗ, ಅಲ್ಜೈಮರ್ ಮತ್ತು ಕರುಳಿನ ಅಸ್ವಸ್ಥತೆ ಮಾತ್ರವಲ್ಲದೆ ಕೊಲೆಸ್ಟರಾಲ್ ವಿಷಯವೂ ಕೆಲವೊಮ್ಮೆ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಕಂಡು ಬಂದಿದೆ. ಅಸಹಜ ಕೊಲೆಸ್ಟರಾಲ್ ಮಟ್ಟಗಳಿಂದ ಅಲ್ಜೈಮರ್ ಮತ್ತು ಕರುಳಿನ ಅಸ್ವಸ್ಥತೆ ಎರಡಕ್ಕೂ ಅಪಾಯವಾಗಬಹುದು ಎಂದು ಅಡೆಯುಯಿ ತಿಳಿಸಿದರು.