ನವದೆಹಲಿ: ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚು ಸುದ್ದಿ ಆಗ್ತಿರುವ ರಾಷ್ಟ್ರ ಅಂದ್ರೆ ಅದು ಚೀನಾ. ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19 ವೈರಸ್ನಿಂದ ಈ ಕಮ್ಯುನಿಷ್ಟ ರಾಷ್ಟ್ರದ ಆರ್ಥಿಕತೆ ಕೂಡ ಅಲ್ಲಾಡಿದ್ದು ಸುಳ್ಳಲ್ಲ. ಇದೀಗ ಮತ್ತೊಂದು ವಿಚಾರವಾಗಿ ಚೀನಾ ಸುದ್ದಿಯಾಗಿದೆ. ಇಲ್ಲಿನ ಮಹಿಳೆಯೋರ್ವಳ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆ ಆರೋಗ್ಯಯುತವಾಗಿದ್ದಾಳೆ.
ಈ ಮಹಿಳೆ ಕಣ್ಣಿನಲ್ಲಿ ಕೆರೆತದ ಸಮಸ್ಯೆಯನ್ನು ಅನುಭವಿಸುತ್ತಿದ್ದಳು. ಒಂದು ದಿನ ಹೀಗೆ ಕಣ್ಣನ್ನು ಉಜ್ಜಿಕೊಳ್ಳುವಾಗ ಜೀವಂತ ಹುಳುವೊಂದು ಆಕೆಯ ಕಣ್ಣಿನಿಂದ ಹೊರಬಿದ್ದಿತ್ತು. ಇದರಿಂದ ಮಹಿಳೆ ಆಘಾತಕ್ಕೊಳಗಾಗಿದ್ದಳು. ತಕ್ಷಣಕ್ಕೆ ಆಕೆ ತಾನಿದ್ದ ಪ್ರದೇಶವಾದ ಕುನ್ಮಿಂಗ್ನಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಈಕೆಯನ್ನು ಪರಿಶೀಲಿಸಿದ ವೈದ್ಯರು ಕೂಡ ಶಾಕ್ ಆಗಿದ್ದರು. ಆಕೆಯ ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ನಡುವೆ ಜೀವಂತ ಹುಳುಗಳು ತೇವಳುತ್ತಿದ್ದುದನ್ನು ಕಂಡು ಅವರು ಕೂಡ ಆತಂಕ ವ್ಯಕ್ತಪಡಿಸಿದ್ದರು. ಸ್ಥಳೀಯ ಮಾಧ್ಯಮ ವರದಿ ಮಾಡಿದಂತೆ ಆಕೆಯ ಬಲಗಣ್ಣಿನಿಂದ 45ಕ್ಕೂ ಹೆಚ್ಚು ಮತ್ತು ಎಡಗಣ್ಣಿನಿಂದ 10 ಹುಳುಗಳು ಸೇರಿ 60ಕ್ಕೂ ಹೆಚ್ಚು ಹುಳುಗಳನ್ನು ತೆಗೆದಿದ್ದಾರೆ.
ಹುಳುಗಳ ಪತ್ತೆಗೆ ಕಾರಣ: ಈ ಕುರಿತು ಮಾತನಾಡಿರುವ ಡಾಕ್ಟರ್ ಗುಹನ್, ಮಹಿಳೆಯ ಕಣ್ಣಿನಲ್ಲಿ ಅಧಿಕ ಸಂಖ್ಯೆಯ ಪರಾವಲಂಬಿ ಹುಳುಗಳು ಇದ್ದವು. ಇದೊಂದು ಅಪರೂಪದ ಪ್ರಕರಣವಾಗಿದೆ ಎಂದಿದ್ದಾರೆ. ಆರಂಭದಲ್ಲಿ ಆಕೆಯ ಫಿಲಾರಿಯೋಡಿಯಾ ಪ್ರಕಾರದ ದುಂಡಾಣು ಹುಳುಗಳಿಂದ ಸೋಂಕಿಗೆ ಒಳಗಾಗಿದ್ದಳು. ಈ ಸೋಂಕು ಸಾಮಾನ್ಯವಾಗಿ ನೊಣದ ಮೂಲಕ ಹರಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಹಿಳೆಯು ಇದು ನಾಯಿ ಅಥವಾ ಬೆಕ್ಕಿನ ಸಂಪರ್ಕದಿಂದ ಆಗಿದೆ ಎಂದು ಭಾವಿಸಿದ್ದಳು. ಆಕೆ ಪ್ರಾಣಿಗಳನ್ನು ಮುಟ್ಟಿ, ಆ ಕೈಯಿಂದ ಕಣ್ಣನ್ನು ಉಜ್ಜಿಕೊಂಡ ಪರಿಣಾಮ ಹೀಗೆ ಆಗಿದೆ ಎಂದು ತಿಳಿದಿದ್ದಳು.
ನಿಯಮಿತ ಚಿಕಿತ್ಸೆಗೆ ಸೂಚನೆ: ಸದ್ಯ ಮಹಿಳೆಯರ ಕಣ್ಣಿನಿಂದ ಪರಾವಲಂಬಿ ಹುಳುಗಳನ್ನು ತೆಗೆದಿದ್ದು, ಉಳಿದಿರುವ ಲಾರ್ವಾಗಳ ಸಾಧ್ಯತೆ ಕುರಿತು ಮೇಲ್ವಿಚಾರಣೆ ನಡೆಸಲು ಆಕೆಯನ್ನು ನಿಯಮಿತ ಚಿಕಿತ್ಸೆಗೆ ಬರುವಂತೆ ತಿಳಿಸಲಾಗಿತ್ತು. ಅಲ್ಲದೇ, ಆಕೆಗೆ ಯಾವುದೇ ಪ್ರಾಣಿಗಳನ್ನು ಮುಟ್ಟಿದಾಕ್ಷಣ ಕೈಯನ್ನು ತೊಳೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಈ ರೀತಿಯ ಹುಳುಗಳು ದೇಹದ ಸೂಕ್ಷ್ಮ ಪ್ರದೇಶವಾದ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚೀನಾಗಿಂತ ಆಫ್ರಿಕಾದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಈ ರೀತಿ ಆದಾಗ ಕಣ್ಣಿನ ಉರಿಯೂತ ಸಂಭವಿಸುತ್ತದೆ. ಕೆಲವು ಪ್ರಕರಣದಲ್ಲಿ ಕರುಡುತನಕ್ಕೂ ಕಾರಣವಾಗುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಕಿವಿಯ ವ್ಯಾಕ್ಸ್ ತೆಗೆಯುವ ಅಭ್ಯಾಸವಿದೆಯೇ?: ತಜ್ಞರ ಎಚ್ಚರಿಕೆ ಗಮನಿಸಿ