ವಾತಾವರಣದಲ್ಲಿನ ಬದಲಾವಣೆ ಮತ್ತು ಮೋಡ ಕವಿದ ವಾತಾವರಣದಿಂದ ನಗರದಲ್ಲಿ ವೈರಲ್ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕಳೆದ ಮೂರು-ನಾಲ್ಕು ದಿನದಿಂದ ಭಾಗಶಃ ಮೋಡ ಕವಿದ ವಾತಾವರಣವಿದ್ದು ಗಂಟೆಗೆ 28 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಆರ್ದ್ರತೆಯ ಪ್ರಮಾಣದಿಂದಾಗಿ ಅನೇಕರಲ್ಲಿ ಜ್ವರ, ಕೆಮ್ಮು ಮತ್ತು ನೆಗಡಿಯಂತಹ ಸೋಂಕು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಗಾಳಿ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಸೈನಸೈಟಿಸ್ ಸಮಸ್ಯೆ ಹೆಚ್ಚಿರುವವರು ಸೋಂಕಿಗೆ ಬಲು ಬೇಗ ತುತ್ತಾಗುತ್ತಿದ್ದಾರೆ.
ಸಾಮಾನ್ಯವಾಗಿ ಮಳೆಗಾಲ ಆರಂಭದ ಸಮಯದಲ್ಲಿ ಈ ರೀತಿಯ ಸೋಂಕುಗಳ ಪ್ರಮಾಣ ವಿಪರೀತ. ಇದು ಸೊಳ್ಳೆಗಳ ಸಂತಾನೋತ್ಪತ್ತಿ ಸಮಯವೂ ಆಗಿರುವುದರಿಂದ ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದು ಮೇ ಆರಂಭದಲ್ಲಿ ಶುರುವಾದ ಅಕಾಲಿಕ ಮಳೆಯ ಪರಿಣಾಮವಾಗಿ ಇದೀಗ ಸೊಳ್ಳೆಗಳ ಸೋಂಕು ಹೆಚ್ಚಾಗಿದೆ. ಡೆಂಗ್ಯೂ ಹೊರತಾಗಿ ಚಿಕುನ್ಗುನ್ಯಾ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಋತುಮಾನದ ಜ್ವರಗಳು ಬಾಧಿಸುತ್ತವೆ.
ಹೆಚ್ಚಿದ ತಂಪು ವಾತಾವರಣ: ಸಾಮಾನ್ಯವಾಗಿ ತಂಪು ವಾತಾವರಣದಿಂದ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಸೋಂಕು ಉಂಟು ಮಾಡುವ ವೈರಸ್ ಮತ್ತು ಗಾಳಿಯಲ್ಲಿ ಬೇಗ ಹರಡುತ್ತದೆ. ನಗರದಲ್ಲಿ ತಂಪು ವಾತಾವರಣ ಹೆಚ್ಚಿದ ಕಾರಣ ನೆಗಡಿ, ಕೆಮ್ಮು, ಸೈನಸೈಟಿಸ್ ಸಮಸ್ಯೆ, ಮೈ-ಕೈ ನೋವು ಕಾಣಿಸಿಕೊಳ್ಳುತ್ತಿದೆ.
ಗಾಳಿಯಿಂದಾಗಿ ಧೂಳಿನ ಪ್ರಮಾಣ ನಗರದಲ್ಲಿ ಹೆಚ್ಚುತ್ತಿದ್ದು, ಧೂಳಿನ ಅಲರ್ಜಿ ಉಂಟಾಗುತ್ತದೆ. ಇದರ ಪರಿಣಾಮವಾಗಿ ಅಲರ್ಜಿಕ್ ಸೈನಸೈಟಿಸ್ ಇರುವವರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇಂತಹ ಧೂಳಿನ ಅಥವಾ ಸೈನಸೈಟಿಸ್ ಸಮಸ್ಯೆ ಹೊಂದಿರುವವರು ಮಾಸ್ಕ್ ಧರಿಸಿ ಓಡಾಡುವುದು ಸೂಕ್ತ. ಇದರಿಂದ ಅಲರ್ಜಿ ಉಂಟಾಗುವ ವೈರಾಣುಗಳು ಸೈನಾಸ್ಗೆ ಹೋಗದಂತೆ ತಡೆಯಬಹುದು.
ಇಂತಹ ಗಾಳಿ ಮತ್ತು ಧೂಳಿನ ವಾತಾವರಣವನ್ನು ನಿರ್ಲಕ್ಷ್ಯಿಸುವುದಿಂದ ಅದು ಸೈನಸೈಟಿಸ್ನಿಂದ ಫರಂಜೈಟಿಸ್, ಅಪ್ಪರ್ ರೆಸ್ಪರೆಟರಿ ಇನ್ಫೆಕ್ಷನ್ (ಕೆಮ್ಮು) ಹೆಚ್ಚಾದಾಗ ಜ್ವರದಂತಹ ಸೋಂಕು ಕೂಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ರಾಜಾಜಿನಗರದ ಖಾಸಗಿ ಕ್ಲಿನಿಕ್ನ ವೈದ್ಯರಾದ ಡಾ.ರಾಘವೇಂದ್ರ ಎನ್ ಸಲಹೆ ನೀಡಿದ್ದಾರೆ.
ಪೋರ್ಟಿಸ್ ಆಸ್ಪತ್ರೆಯ ಇಂಟರನಲ್ ಮೆಡಿಸಿನ್ನ ವೈದ್ಯರಾದ ಡಾ.ಆದಿತ್ಯ ಚೌತಿ ಮಾತನಾಡಿ, ಹೆಚ್ಚಾದ ತಂಪಾದ ವಾತಾವರಣದಲ್ಲಿ ಇರುವುದನ್ನು ನಿಯಂತ್ರಿಸುವುದು ಸೂಕ್ತ. ಆದಷ್ಟು ಬೆಚ್ಚಗಿನ ಉಡುಪು ಧರಿಸಿ, ಜ್ವರ ಬಂದ ಕೂಡಲೇ ನಿರ್ಲಕ್ಷಿಸದೇ, ಮನೆ ಮದ್ದು ಪ್ರಯೋಗಿಸದೇ ವೈದ್ಯರನ್ನು ಕಾಣುವುದು ಒಳ್ಳೆಯದು ಎಂದಿದ್ದಾರೆ.
ಮಕ್ಕಳ ಬಗ್ಗೆ ಇರಲಿ ಕಾಳಜಿ: 10 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವುದರಿಂದ ಅವರಿಗೆ ಬಲು ಬೇಗ ಸೋಂಕುಗಳು ಹರಡುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದೊಳ್ಳೆದು. ಇಂತಹ ಸೋಂಕಿತ ಮಕ್ಕಳನ್ನು ಶಾಲೆಗೆ ಕಳುಹಿಸದೇ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದು.
ಈ ರೀತಿ ಇರಲಿ ಆರೈಕೆ: ಈ ಸಮಯದಲ್ಲಿ ಕಾಯಿಸಿ, ಆರಿಸಿದ ಶುದ್ದ ನೀರನ್ನು ಕುಡಿಯುವುದು ಉತ್ತಮ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸ್ವಚ್ಛವಾದ ಬಿಸಿಯಾದ ತಾಜಾ ಆಹಾರ ಸೇವನೆ ಮಾಡಬೇಕು. ಹೆಚ್ಚು ಬೆಚ್ಚಿಗಿನ ಬಟ್ಟೆ ಹಾಕುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 11 ದಿನದಲ್ಲಿ 178 ಡೆಂಘೀ ಪ್ರಕರಣ ದಾಖಲು